×
Ad

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಮೂವರು ಬಲಿ; 430 ಮಂದಿಗೆ ಕೊರೋನ ಪಾಸಿಟಿವ್

Update: 2021-05-01 20:49 IST

ಉಡುಪಿ, ಮೇ 1: ಜಿಲ್ಲೆಯಲ್ಲಿ ಕೋವಿಡ್-19ರ ಅಬ್ಬರ ಹೆಚ್ಚುತ್ತಿರುವಂತೆ ಇಂದು ಮತ್ತೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿದೆ. ದಿನದಲ್ಲಿ 430 ಮಂದಿ ಹೊಸದಾಗಿ ಕೋವಿಡ್ ಸೋಂಕಿತರ ಪಟ್ಟಿಗೆ ಸೇರಿದ್ದಾರೆ.

ಇಂದು ಕುಂದಾಪುರ ತಾಲೂಕು ಕಂಡ್ಲೂರಿನ 94ರ ಹರೆಯದ ಹಾಗೂ ಬ್ರಹ್ಮಾವರದ 64 ವರ್ಷ ಪ್ರಾಯದ ವೃದ್ಧರು ಹಾಗೂ ಬಾರಕೂರಿನ 73 ವರ್ಷದ ಮಹಿಳೆಯೊಬ್ಬರು ಮೃತರಾಗಿದ್ದಾರೆ.

ಇವರಲ್ಲಿ ಇಬ್ಬರು ಬ್ರಹ್ಮಾವರದ ಹಾಗೂ ಉಳಿದೊಬ್ಬರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂವರು ತೀವ್ರವಾದ ಕೋವಿಡ್‌ಗೆ ತುತ್ತಾಗಿದ್ದರಲ್ಲದೇ ಮಧುಮೇಹ, ನ್ಯುಮೋನಿಯಾದಿಂದಲೂ ನರಳುತಿದ್ದರು. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 201ಕ್ಕೇರಿದೆ.

ಇಂದು ಪಾಸಿಟಿವ್ ಬಂದ 430 ಮಂದಿಯಲ್ಲಿ 230 ಮಂದಿ ಪುರುಷರಾದರೆ, 200 ಮಂದಿ ಮಹಿಳೆಯರು. ಇವರಲ್ಲಿ 226 ಮಂದಿ ಉಡುಪಿ ತಾಲೂಕಿನವರು. ಉಳಿದಂತೆ 162 ಮಂದಿ ಕುಂದಾಪುರ ಹಾಗೂ 39 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಗಳಿಂದ ವಿವಿಧ ಕಾರಣ ಗಳಿಗಾಗಿ ಆಗಮಿಸಿದ ಮೂವರು ಸಹ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ 380 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 29,128 ಕ್ಕೇರಿದೆ. ನಿನ್ನೆ ಜಿಲ್ಲೆಯ 2565 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 430 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 31,972 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,06,680 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News