ಉಪ್ಪಿನಂಗಡಿ: ಎಟಿಎಂ ದರೋಡೆಗೆ ಯತ್ನಿಸಿದ ಪ್ರಕರಣ; ಆರೋಪಿ ಸೆರೆ

Update: 2021-05-01 16:10 GMT

ಉಪ್ಪಿನಂಗಡಿ: ಎಟಿಎಂ ದರೋಡೆಗೆ ಯತ್ನಿಸಿದ ಪ್ರಕರಣವನ್ನು 48 ಗಂಟೆಗಳೊಳಗೆ ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಸವಣೂರು ಗ್ರಾಮದ ಶಾಂತಿನಗರ ಮಾಂತೇರು ನಿವಾಸಿ ಸಮೀರ್ ಯಾನೆ ಅಮ್ಮಿ (23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಉಪ್ಪಿನಂಗಡಿ ಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂ ದರೋಡೆಗೆ ಯತ್ನಿಸಿದ ಘಟನೆ ಎ.28ರಂದು ಬೆಳಕಿಗೆ ಬಂದಿತ್ತು. ಅಲ್ಲಿದ್ದ ಎರಡು ಮೆಷಿನ್‍ಗಳನ್ನು ಆಯುಧದಿಂದ ಜಖಂಗೊಳಿಸಿ ಒಡೆಯಲು ಯತ್ನಿಸಿದ್ದು, ಅಲ್ಲಿನ ಮೂರು ಸಿಸಿ ಕ್ಯಾಮೆರಾಗಳನ್ನು ಹಾನಿಗೊಳಿಸಲಾಗಿತ್ತು. ಆದರೆ ಎಟಿಎಂನಿಂದ ಹಣ ಲೂಟಿ ಮಾಡಲು ಸಾಧ್ಯವಾಗಿರಲಿಲ್ಲ.

ಎ.27ರ ಸಂಜೆ 6.45ರಿಂದ ಎ.28ರ ಬೆಳಗ್ಗೆ 7.40ರ ನಡುವೆ ಈ ದರೋಡೆ ಯತ್ನ ನಡೆದಿದ್ದು, ದರೋಡೆಕೋರರು ಎಟಿಎಂ ಮೆಷಿನ್ ಹಾಗೂ ಸಿಸಿ ಕ್ಯಾಮರಾ ಹಾನಿಗೆಡವಿದ್ದರಿಂದ ಸುಮಾರು 6 ಲಕ್ಷ ನಷ್ಟವಾಗಿದೆ ಎಂದು ಎಸ್‍ಬಿಐ ಉಪ್ಪಿನಂಗಡಿ ಶಾಖೆ ಮ್ಯಾನೇಜರ್ ಶ್ರೀಧರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಶೇಷ ತಂಡ ರಚಿಸಿ, ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಮೇ 1ರಂದು ಆರೋಪಿಯನ್ನು ಸವಣೂರಿನಲ್ಲಿ ಬಂಧಿಸಿದ್ದು, ವಿಚಾರಣೆ ವೇಳೆ ಈತ ದರೋಡೆಗೆ ಯತ್ನಿಸಿದ್ದನ್ನು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಾರ್ವಜನಿಕ ಪ್ರಶಂಸೆ: ಶೀಘ್ರವಾಗಿ ಈ ಪ್ರಕರಣದ ಆರೋಪಿಯನ್ನು ಬಂಧಿಸಿದ  ಪೊಲೀಸರ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭಾಸ್ಕರ ಒಕ್ಕಲಿಗ ಅವರ ಆದೇಶದಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣೆ ಪಿಎಸ್‍ಐ ಕುಮಾರ್ ಸಿ, ಪ್ರೊಬೆಷನರಿ ಪಿಎಸ್‍ಐ ಅನಿಲ ಕುಮಾರ್, ಎಎಸ್‍ಐ ಚೋಮ, ಪಿ. ಹರೀಶ್ಚಂದ್ರ, ವೃತ್ತ ಕಚೇರಿಯ ಸಿಬ್ಬಂದಿ ಜಗದೀಶ್ ಎ., ಶಿವರಾಜ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News