ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ
Update: 2021-05-01 21:46 IST
ಮಂಗಳೂರು : ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಭಿಷೇಕ್ ಮತ್ತು ಸಮೀರ್ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲ್‍ನ ಸಿ ಬ್ಲಾಕ್‍ನ ವಿಚಾರಣಾಧೀನ ಕೈದಿಗಳು ಜೈಲ್‍ನಲ್ಲಿ ತಿರುಗಾಡುತ್ತಿದ್ದಾಗ ಅಭಿಷೇಕ್ ಮತ್ತು ಸಮೀರ್ ಮಧ್ಯೆ ವಾಗ್ವಾದ ನಡೆದಿದೆ. ಇದು ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಜೈಲು ಸಿಬ್ಬಂದಿ ಇಬ್ಬರನ್ನೂ ಬಿಡಿಸಿದ್ದಾರೆ.
ವಾರದಲ್ಲಿ ಎರಡನೇ ಘಟನೆ: ಮಂಗಳೂರು ನಗರದ ಕಾರಾಗೃಹದಲ್ಲಿ ಕಳೆದ ರವಿವಾರ ಬೆಳಗ್ಗೆ ವಿಚಾರಣಾ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಗಲಾಟೆ ತಡೆಯಲು ಹೋದ ಜೈಲು ಸಿಬ್ಬಂದಿಗೂ ಹಲ್ಲೆ ಮಾಡಲಾಗಿತ್ತು. ಇದೀಗ ಮತ್ತೆ ಕೈದಿಗಳ ಮಧ್ಯೆ ಹೊಡೆದಾಟ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.