ನೆಕ್ಕಿಲಾಡಿ: ಹೆದ್ದಾರಿ ಬದಿಯ ಮರ ನಾಪತ್ತೆ !

Update: 2021-05-01 16:48 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ವ್ಯಾಪ್ತಿಯ ಕರ್ವೇಲ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಮರವನ್ನು ಹಾಡಹಗಲೇ ಕಡಿಯಲಾಗಿದ್ದು, ಬಳಿಕ ಆ ಮರ ಅರಣ್ಯ ಇಲಾಖೆಯನ್ನು ತಲುಪದೇ ಅಲ್ಲಿಂದ ನಾಪತ್ತೆಯಾಗಿದ್ದು, ಹಲವು ಸಂಶಯಕ್ಕೆ ಕಾರಣವಾಗಿದೆ.

ಇಲ್ಲಿನ ಕರ್ವೇಲ್ ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಬೃಹತ್ ಮಾವಿನ ಮರವೊಂದಿತ್ತು. ಅದರ ಬುಡದಲ್ಲಿ ಹಾಕಿದ್ದ ತ್ಯಾಜ್ಯಕ್ಕೆ ಯಾರೋ ಬೆಂಕಿ ಕೊಟ್ಟಿದ್ದರಿಂದ ಮರದ ಬುಡಕ್ಕೂ ಬೆಂಕಿ ತಾಗಿ ಅದರ ಬುಡ ಸುಟ್ಟು ಹೋಗಿ ಮರ ಭಾಗಶಃ ಒಣಗಿ ಹೋಗಿತ್ತು. ಇದು ಹೆದ್ದಾರಿಗೆ ಬೀಳುವ ಅಪಾಯದಲ್ಲಿತ್ತು. ಇದನ್ನು ಗ್ರಾ.ಪಂ.ನವರು ಹೇಳಿದ್ದರೆಂದು ಸ್ಥಳೀಯ ಕೆಲವರು ಕಡಿದಿದ್ದಾರೆ ಎನ್ನಲಾಗಿದ್ದು, ಕಡಿದ ಮರ ಮಾತ್ರ ಅರಣ್ಯ ಇಲಾಖೆಯ ಸುಪರ್ದಿಗೆ ಮುಟ್ಟದೆ ಸ್ಥಳದಿಂದ ನಾಪತ್ತೆಯಾಗಿದೆ.

ಮರವು ಅರಣ್ಯ ಇಲಾಖೆಯನ್ನು ತಲುಪದೇ ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯರಿಂದ ಇದೀಗ ಹಲವು ಆರೋಪಗಳು ಕೇಳಿ ಬರುತ್ತಿವೆ. ಆ ಮರ ಅರ್ಧ ಒಣಗಿದ್ದು, ಅರ್ಧದಷ್ಟು ಹಸಿಯಿತ್ತು. ಮೇಲ್ನೋಟಕ್ಕೆ ಮಾತ್ರ ಒಣಗಿದಂತೆ ಕಾಣುತ್ತಿತ್ತು. ಅದರ ಕಡಿದ ಬುಡ ನೋಡುವಾಗಲೇ ಇದು ಗೊತ್ತಾಗುತ್ತಿದೆ. ಆ ಮರವನ್ನು ಹಾಡಹಗಲೇ ಕಡಿದು ಉರುಳಿಸಲಾಗಿದೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷರು, ಕೆಲ ಸದಸ್ಯರು ಸ್ಥಳದಲ್ಲಿದ್ದರು. ಅದನ್ನು ಮೂರು ತುಂಡು ಮಾಡಿ ಮಾರಾಟ ಮಾಡಲಾಗಿದೆ. ಇದರಲ್ಲಿ ಕೆಲವರ ಶಾಮೀಲಾತಿ ಇದೆ ಎಂದು ಆರೋಪಿಸುತ್ತಿದ್ದಾರಲ್ಲದೆ, ಕಟ್ಟಿಗೆಗಾಗಿ ಸಾರ್ವಜನಿಕ ಸ್ಥಳದಲ್ಲಿರುವ ಮರದ ಒಣಗಿದ ಗೆಲ್ಲು ಕಡಿದರೂ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿದ ಉದಾಹರಣೆಗಳಿರುವಾಗ ಇಲ್ಲಿ ಇಷ್ಟು ದೊಡ್ಡ ಮರ ನಾಪತ್ತೆಯಾಗಿರುವ ಬಗ್ಗೆ ಅರಣ್ಯ ಇಲಾಖೆಯವರು ಮೌನ ವಹಿಸಿರುವುದೇಕೆ? ಈ ಮರ ಎಲ್ಲಿ ಹೋಯಿತೆಂದು ಅವರು ಯಾಕೆ ಪತ್ತೆ ಹಚ್ಚುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮರವೊಂದು ಒಣಗಿ ಹೋಗಿದ್ದು, ಬೀಳುವ ಸ್ಥಿತಿಯಲ್ಲಿದೆ. ಇದರಿಂದ ವಾಹನ ಸವಾರರಿಗೆ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ದೂರೊಂದು ನಮಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಕಡಿಯಲು ಹೇಳಿದ್ದೆವು. ನಾನು ನೋಡಿದ ಮಟ್ಟಿಗೆ ಅದರಲ್ಲಿ ಒಂದು ಆಪೆ ರಿಕ್ಷಾ ಆಗುವಷ್ಟು ಕೂಡಾ ಕಟ್ಟಿಗೆ ಇರಲಿಲ್ಲ. ಆ ಮೇಲೆ ಕಡಿದ ಮರವನ್ನು ಯಾರು ಕೊಂಡೋಗಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News