ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವ್ಯಾಕ್ಸಿನ್ ಗೆ ಚಾಲನೆ: ಸುರಕ್ಷತೆ ಮರೆತ ಆರೋಪ
ಪಡುಬಿದ್ರಿ: ಪಡುಬಿದ್ರಿ ಮತ್ತು ಕಾಪುವಿನಲ್ಲಿ ಗೊಂದಲ ಉಂಟಾಗಿದ್ದು, ಮುದರಂಗಡಿಯಲ್ಲಿ ಯಾವುದೇ ಗೊಂದಲಗಳಿಲ್ಲದೆ ಶನಿವಾರ ಕೋವಿಡ್ ವ್ಯಾಕ್ಸಿನ್ ಜನರು ಪಡೆದರು.
ಕಾಪು ಮತ್ತು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರು ಮುಂಜಾನೆಯಿಂದಲೇ ಜಮಾಯಿಸಿದ್ದು, ಕಾಪುವಿನಲ್ಲಿ 40, ಪಡುಬಿದ್ರಿಯಲ್ಲಿ 70 ಹಾಗೂ ಮುದರಂಗಡಿಯಲ್ಲಿ 44 ಮಂದಿಗೆ ಲಸಿಕೆ ನೀಡಲಾಯಿತು. ಆದರೆ ಕೇವಲ ಕೋವಿಶೀಲ್ಡ್ ವ್ಯಾಕ್ಸಿನ್ ಮಾತ್ರ ಲಭ್ಯವಿದ್ದು, ಕೋವ್ಯಾಕ್ಸಿಸಿನ್‌ಗಾಗಿ ನೋಂದಾಯಿಸಿದ ಮಂದಿ ಲಸಿಕೆಯಿಲ್ಲದೆ ವಾಪಾಸಾಗುವಂತಾಯಿತು. ಪೊಲೀಸರ ಸಹಾಯದಿಂದ ಜನ ಸಂದಣಿಯನ್ನು ನಿಯಂತ್ರಿಸಿ ನೋಂದಾಯಿಸಿದ ಮಂದಿಗೆ ವ್ಯಾಕ್ಸಿನ್ ನೀಡಲಾಯಿತು.
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 3 ದಿನಗಳಿಂದ ವ್ಯಾಕ್ಸಿನೇಷನ್ ನೀಡದೆ ಇರುವುದರಿಂದ ಶನಿವಾರ ಮುಂಜಾನೆ 8 ಗಂಟೆಯಿಂದಲೇ ಜನ ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಯೆದುರು ಜಮಾಯಿಸಿದ್ದರು. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಟೋಕನ್ ಪಡೆದ 40 ಮಂದಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದ್ದು, ಶನಿವಾರ ಆಗಮಿಸಿದವರ ನೋಂದಣಿ ಮಾಡಿ ಟೋಕನ್ ವಿತರಿಸಲಗಿದೆ.
ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ನಡುವೆಯೂ 44 ಮಂದಿಗೆ ವ್ಯಾಕ್ಸಿನೇಷನ್ ನಡೆದಿದೆ.
ಮುಂಬೈನಲ್ಲಿ ಪ್ರಥಮ ಡೋಸ್ ವ್ಯಾಕ್ಸಿನ್ ಪಡೆದ ಮಂದಿ 2ನೇ ಡೋಸ್ ಪಡೆಯಲು ಆಸ್ಪತ್ರೆಗಳತ್ತ ಆಗಮಿಸುತ್ತಿದ್ದು, ಹಿಂದೆ ಪಡೆದ ವ್ಯಾಕ್ಸಿನ್ ಯಾವುದೆಂಬುದರ ಬಗ್ಗೆ ಸ್ಪಷ್ಟತೆಯಿಲ್ಲದೆ ಗೊಂದಲಕ್ಕೀಡಾಗುತ್ತಿರುವ ಘಟನೆಗಳು ನಡೆದಿವೆ.