ರವಿವಾರದಿಂದ ರಾಜ್ಯಾದ್ಯಂತ ಹಣ್ಣು, ತರಕಾರಿ, ಹಾಲು ಮಾರಾಟಕ್ಕೆ ಸಂಜೆ 6ರವರೆಗೆ ಅವಕಾಶ
ಉಡುಪಿ, ಮೇ 1: ರಾಜ್ಯ ಸರಕಾರ ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಹೊರಡಿಸಿರುವ ಮಾರ್ಗಸೂಚಿಯನ್ನು ಮತ್ತೆ ಪರಿಷ್ಕರಿಸಿದ್ದು, ನಾಳೆ (ರವಿವಾರ)ಯಿಂದಲೇ ಜಾರಿಗೊಳ್ಳುವಂತೆ ಹಾಪ್‌ಕಾಮ್ಸ್, ಎಲ್ಲಾ ಹಾಲಿನ ಬೂತ್‌ಗಳು, ತಳ್ಳುವ ಗಾಡಿ ಮೂಲಕ ಹಣ್ಣು, ತರಕಾರಿಗಳ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಅವಕಾಶವನ್ನು ನೀಡಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ/ನೂಕುನುಗ್ಗಲುಗಳನ್ನು ತಪ್ಪಿಸಲು ಮೇ 2ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದ್ದು, ಇದರ ಬದಲಿಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಾಪ್‌ಕಾಮ್ಸ್, ಹಾಲಿನ ಬೂತ್‌ಗಳು, ತಳ್ಳುಗಾಡಿಯ ಮೂಲಕ ಮಾರಾಟ ಮಾಡುವ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬಹುದು. ಆದರೆ ಅವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೇ, ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಬೇಕು. ಈ ವೇಳೆ ಕೋವಿಡ್-19ರ ನಿಯಮಗಳನ್ನು ಪಾಲಿಸಬೇಕು ಎಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳು ಇಂದು ರಾತ್ರಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಅಪರಾಹ್ನ 12 ರವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಈ ಮೊದಲು ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಈ ಅವಕಾಶವಿತ್ತು.