ಕೇರಳದಲ್ಲಿ ಬಿಜೆಪಿಗೆ ಆಘಾತ: ಖಾತೆ ತೆರೆಯದ ಕೇಸರಿ ಪಕ್ಷ

Update: 2021-05-02 17:14 GMT

ಕೋಝಿಕ್ಕೋಡ್,ಮೇ2: ಕೇರಳದ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಗೆ ಭಾರೀ ಅಘಾತ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯ ಮೊದಲ ಬಾರಿಗೆ ಖಾತೆ ತೆರೆದಿದ್ದ ಬಿಜೆಪಿ ಈ ಸಲ ಒಂದು ಸ್ಥಾನವನ್ನೂ ಗೆಲ್ಲಲೂ ವಿಫಲವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ನೇಮಂ ಕ್ಷೇತ್ರವನ್ನು ಕೂಡಾ ಅದು ಈ ಬಾರಿ ಕಳೆದುಕೊಂಡಿದೆ. ನೇಮಂ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ನಾಯಕ ಕುಮ್ಮನಂ ರಾಜಶೇಖರ್ ಕಣಕ್ಕಿಳಿದಿದ್ದರು.
 
2016ರ ವಿಧಾನಸಭಾ ಚುನಾವಣೆಯಲ್ಲಿ ನೇಮಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಓ. ರಾಜ್ ಗೋಪಾಲ್ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆ ಮೂಲಕ ಬಿಜೆಪಿ ಪ್ರಪ್ರಥಮ ಬಾರಿಗೆ ಕೇರಳ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆದಿತ್ತು.
   
ಪಾಲಕ್ಕಾಡ್ ಕ್ಷೇತ್ರದಲ್ಲಿ ಗೆಲುವಿನ ಭರವಸೆ ಹೊಂದಿದ್ದ ಬಿಜೆಪಿಗೆ ಅಲ್ಲೂ ನಿರಾಶೆ ಯಾಗಿದೆ. ಬಿಜೆಪಿ ಅಭ್ಯರ್ಥಿ, ಮೆಟ್ರೋಮ್ಯಾನ್ ಎಂದೇ ಖ್ಯಾತರಾದ ಇ.ಶ್ರೀಧರನ್ ಆರಂಭಿಕ ಹಂತದಲ್ಲಿ ಯುಡಿಎಫ್ ಅಭ್ಯರ್ಥಿ ಶಾಫಿ ಪರಂಬಿಲ್ ವಿರುದ್ಧ ಮುನ್ನಡೆ ಸಾಧಿಸಿದ್ದರು. ಆದರೆ ಕೆಲವು ಸುತ್ತಿನ ಮತ ಏಣಿಕೆಯ ಬಳಿಕ ಶಾಫಿ ಅವರು ಶ್ರೀಧರನ್ರನ್ನು 2657 ಮತಗಳಿಂದ ಸೋಲಿಸಿದ್ದಾರೆ.
  
ನೇಮಂ, ಪಾಲಕ್ಕಾಡ್ ಹೊರತಾಗಿ ಮಂಜೇಶ್ವರಂ ಹಾಗೂ ತ್ರಿಶೂರು ಕ್ಷೇತ್ರಗಳಲ್ಲಿ ಯೂ ಬಿಜೆಪಿ ಗೆಲುವಿನ ನಿರೀಕ್ಷೆಯಿರಿಸಿತ್ತು. ತ್ರಿಶೂರ್ ನಲ್ಲಿ ಸುರೇಶ್ ಗೋಪಿ ಮತ ಎಣಿಕೆಯಲ್ಲಿ ಕೆಲವು ತಾಸುಗಳವರೆಗೆ ಮುನ್ನಡೆಯಲ್ಲಿದ್ದರು. ಆದರೆ ಕೊನೆಗೆ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎಲ್ಡಿಎಫ್ ಅಭ್ಯರ್ಥಿ ಪಿ.ಬಾಲಚಂದ್ರನ್ 1 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
  
ಈ ಸಲದ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕೂಡಾ ಪಡೆಯಲು ವಿಫಲವಾಗಿರುವುದು ಆ ರಾಜ್ಯದಲ್ಲಿನ ಪಕ್ಷದ ನಾಯಕತ್ವಕ್ಕಾದ ಭಾರೀ ಹಿನ್ನಡೆಯೆಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News