ಕೋವಿಡ್ 2ನೇ ಅಲೆ ತಡೆಯಲು ಲಾಕ್ ಡೌನ್ ಪರಿಗಣಿಸಿ: ಕೇಂದ್ರ,ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

Update: 2021-05-03 06:10 GMT

ಹೊಸದಿಲ್ಲಿ: ಕೋವಿಡ್-19 ಪರಿಸ್ಥಿತಿಯ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ರವಿವಾರ ನಿರ್ದೇಶನಗಳನ್ನು ನೀಡಿರುವ ಸುಪ್ರೀಂಕೋರ್ಟ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಸೋಂಕುಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಂಡ ಪ್ರಯತ್ನಗಳು ಹಾಗೂ ತೆಗೆದುಕೊಳ್ಳಲು ಯೋಜಿಸಿರುವ ಕ್ರಮಗಳನ್ನು ದಾಖಲಿಸುವಂತೆ ಆದೇಶಿಸಿದೆ.

ಸಾಮೂಹಿಕ ಸಮಾರಂಭಗಳು ಹಾಗೂ ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರುವುದನ್ನು ಪರಿಗಣಿಸುವಂತೆ ನಾವು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಗಂಭೀರವಾಗಿ ಒತ್ತಾಯಿಸುತ್ತೇವೆ. ಸಾರ್ವಜನಿಕ ಕಲ್ಯಾಣದ ಹಿತದೃಷ್ಟಿಯಿಂದ ಎರಡನೇ ಅಲೆಯಲ್ಲಿ ವೈರಸ್ ಅನ್ನು ತಡೆಗಟ್ಟಲು ಲಾಕ್ ಡೌನ್ ಹೇರುವುದನ್ನು ಪರಿಗಣಿಸಬಹುದು ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.

ಸ್ಥಳೀಯ ವಸತಿ ಅಥವಾ ಗುರುತು ಪತ್ರ ಕೊರತೆಯಿಂದಾಗಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ರೋಗಿಗೆ ಆಸ್ಪತ್ರೆ ಅಥವಾ ಅಗತ್ಯ ಔಷಧಿಗಳನ್ನು ನಿರಾಕರಿಸಬಾರದು ಎಂದು ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಎರಡು ವಾರಗಳಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಕುರಿತಂತೆ ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಇದನ್ನು ಎಲ್ಲಾ ರಾಜ್ಯ ಸರಕಾರಗಳು ಅನುಸರಿಸುತ್ತವೆ. ಅಲ್ಲಿಯ ತನಕ ಸ್ಥಳೀಯ ವಸತಿ ಅಥವಾ ಗುರುತು ಪುರಾವೆ ಇಲ್ಲವೆಂಬ ಕಾರಣಕ್ಕೆ ಯಾವ ರೋಗಿಗೂ ಆಸ್ಪತ್ರೆ ದಾಖಲಿಸುವುದನ್ನು ಹಾಗೂ ಅಗತ್ಯ ಔಷಧಿಗಳನ್ನು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿದೆ.

ಕೋವಿಡ್-19 ಎರಡನೇ ಅಲೆಯಲ್ಲಿ ಹೆಚ್ಚಿನವರಿಗೆ ಹಾಸಿಗೆಯೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ರವಿವಾರ ತಡರಾತ್ರಿ ಬಿಡುಗಡೆ ಮಾಡಿರುವ ತನ್ನ ಆದೇಶದಲ್ಲಿ ನ್ಯಾಯಾಲಯವು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News