ಸುಳ್ಳು ಸುದ್ದಿ ವರದಿ ಮಾಡಿದ ಇಂಡಿಯಾ ಟುಡೇ ನಿರೂಪಕ ರಾಹುಲ್ ಕನ್ವಲ್ ಟಿವಿಯಲ್ಲೇ ಕ್ಷಮೆ ಯಾಚಿಸಬೇಕು: ಶಿವಸೇನೆ

Update: 2021-05-03 15:19 GMT
ರಾಹುಲ್ ಕನ್ವಲ್ (Twitter/@rahulkanwal)

ಮುಂಬೈ: ಕಳೆದ ರಾತ್ರಿ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಸಾರ ಮಾಡುವಾಗ ‘ಇಂಡಿಯಾ ಟುಡೆ’ ವಾಹಿನಿಯ ನಿರೂಪಕ ರಾಹುಲ್ ಕನ್ವಲ್ ಅವರು ‘ಸುಳ್ಳು ಸುದ್ದಿ’ಯೊಂದನ್ನು ವರದಿ ಮಾಡಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.

‘ಸೇನಾ ಗೂಂಡಾಗಳು’ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನವಾಲಾಗೆ ಬೆದರಿಕೆ ಹಾಕಿದ್ದಾರೆ ಹಾಗೂ ಲಸಿಕೆಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಕನ್ವಲ್ ಹೇಳಿದ್ದರು.

ಕನ್ವಲ್ ಅವರು ರಾಜು ಶೆಟ್ಟಿ ನೇತೃತ್ವದ ಮಹಾರಾಷ್ಟ್ರದ ರಾಜಕೀಯ ಪಕ್ಷವಾದ ಸ್ವಾಭಿಮಾನಿ ಶೆತ್ಕರಿ ಸಂಘಟನೆಯನ್ನು ಶಿವಸೇನೆ ಎಂದು ತಪ್ಪಾಗಿ ಭಾವಿಸಿ ಗೊಂದಲಕ್ಕೀಡಾಗಿದ್ದರು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಮಹಾರಾಷ್ಟ್ರಕ್ಕೆ ಲಸಿಕೆ ಸರಬರಾಜನ್ನು ಹೆಚ್ಚಿಸುವಂತೆ ರಾಜು ಶೆಟ್ಟಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದರು.  ಅವರು ಹಾಗೆ ಮಾಡದಿದ್ದರೆ, ತನ್ನ ಪಕ್ಷವು ಪುಣೆಯ ಸೀರಮ್ ಸಂಸ್ಥೆಯಿಂದ ಇತರ ರಾಜ್ಯಗಳಿಗೆ ಲಸಿಕೆಗಳನ್ನು ಸಾಗಿಸುವ ವಾಹನಗಳನ್ನು ತಡೆಯಲಿದೆ ಎಂದು ಅವರು ಬೆದರಿಸಿದ್ದರು.

ತಾನು ತಪ್ಪು ಮಾಡಿದ್ದೇನೆ ಎಂದು ಟ್ವಿಟರ್ ನಲ್ಲಿ ಕನ್ವಲ್ ಒಪ್ಪಿಕೊಂಡಿದ್ದು, "ಗೊಂದಲ ಹಾಗೂ ಮುಜುಗರ ಉಂಟು ಮಾಡಿದ್ದಕ್ಕೆ ವಿಷಾದಿಸುವೆ" ಎಂದು ಹೇಳಿದ್ದರು.

‘ಇಂಡಿಯಾ ಟುಡೆ’ ಸಮೂಹದ ಅರೂನ್ ಪುರಿ ಅವರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿರುವ ಶಿವಸೇನೆ, ಕನ್ವಾಲ್ ಅವರು ಟಿವಿಯಲ್ಲಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕೆಂದು ಒತ್ತಾಯಿಸಿದೆ.

“ಕನ್ವಲ್ ಅವರ ಮಾತು ಸಂಪೂರ್ಣವಾಗಿ ಸುಳ್ಳು ಮತ್ತು ಮಾನಹಾನಿಕರವಾಗಿದೆ. ತಪ್ಪು ಮಾಹಿತಿಯ ಮೂಲಕ ಉದ್ದೇಶಪೂರ್ವಕವಾಗಿ ನಮ್ಮನ್ನು ದೂಷಿಸುವುದು ನಿರೂಪಕನ ರಾಜಕೀಯ ಪಕ್ಷಪಾತವನ್ನು ತೋರಿಸುತ್ತದೆ. ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ಪ್ರಮುಖ ದಿನದಂದು ರಾಷ್ಟ್ರೀಯ ಚರ್ಚೆಯನ್ನು ಬೇರೆಡೆಗೆ ತಿರುಗಿಸಲು ಈ ಕೆಲಸ ಮಾಡಲಾಗಿದೆ” ಎಂದು ಶಿವಸೇನೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News