ಕೇರಳದಲ್ಲಿ ಮೇ 4ರಿಂದ ಮೇ 9ರ ವರೆಗೆ ಕಠಿಣ ನಿರ್ಬಂಧ: ಅಗತ್ಯದ ಸೇವೆಗಳಿಗೆ ವಿನಾಯತಿ

Update: 2021-05-03 18:01 GMT

ತಿರುವನಂತಪುರ, ಮೆ 3: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ 4ರಿಂದ 9ರ ವರೆಗೆ ಕಡ್ಡಾಯ ನಿರ್ಬಂಧಗಳನ್ನು ಹೇರಿ ರಾಜ್ಯ ಸರಕಾರ ಸೋಮವಾರ ಆದೇಶ ಜಾರಿಗೊಳಿಸಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಅಗತ್ಯದ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ಕಠಿಣ ನಿರ್ಬಂಧದ ವ್ಯಾಪ್ತಿಯಲ್ಲಿ ರಾಜ್ಯ-ಕೇಂದ್ರ ಸರಕಾರದ ಉದ್ಯೋಗಿಗಳು, ಇತರ ಸ್ವ-ಆಡಳಿತ ಕಚೇರಿಗಳು, ಅಗತ್ಯದ ಸೇವೆಗಳ ಇಲಾಖೆಗಳು, ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳು ಒಳಗೊಳ್ಳುವುದಿಲ್ಲ. ಇತರ ಕಚೇರಿಗಳಲ್ಲಿ ಸೀಮಿತ ಸಂಖ್ಯೆ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಗತ್ಯದ ಸೇವೆಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯಮ, ಕೈಗಾರಿಕೆ ಘಟಕ ಹಾಗೂ ಸಂಸ್ಥೆಗಳಿಗೆ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಈ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಐಡೆಂಟಿಟಿ ಕಾರ್ಡ್ ಹೊಂದಿದ್ದರೆ, ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ವೈದ್ಯಕೀಯ ಆಮ್ಲಜನಕ ಸಾಗಾಟಕ್ಕೆ ಖಾತರಿ ನೀಡುವಂತೆ ಕೂಡ ಸರಕಾರ ನಿರ್ದೇಶಿಸಿದೆ. ಆದರೆ, ಆಮ್ಲಜನಕ ತಂತ್ರಜ್ಞರು ಹಾಗೂ ಆರೋಗ್ಯ-ನೈರ್ಮಲೀಕರಣ ಕಾರ್ಯಕರ್ತರು ಪ್ರಯಾಣಿಸುವ ಸಂದರ್ಭ ಕಚೇರಿ ನೀಡಿದ ಐಡೆಂಟಿಟಿ ಕಾರ್ಡ್ ಹೊಂದಿರಬೇಕು.

ಟೆಲಿಕಾಂ ಸೇವೆ, ಮೂಲಭೂತ ಸೌಕರ್ಯ, ಅಂತರ್ಜಾಲ ಸೇವೆ ಪೂರೈಕೆದಾರರು, ಪೆಟ್ರೋನೆಟ್, ಪೆಟ್ರೋಲಿಯಂ ಹಾಗೂ ಎಲ್‌ಪಿಜಿ ಘಟಕಗಳು ಅಗತ್ಯದ ಸೇವೆಗಳಲ್ಲಿ ಒಳಗೊಳ್ಳುತ್ತವೆ.

ಐಟಿ ವಲಯದಲ್ಲಿ ಕಚೇರಿಗಳ ನಿರ್ವಹಣೆಗೆ ಬೇಕಾದ ಸಿಬ್ಬಂದಿ ಹಾಜರಾಗಬಹುದು. ಹೆಚ್ಚಿನ ಜನರಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ಒದಗಿಸಬೇಕು. ದಿನಸಿ ಅಂಗಡಿ, ಹಣ್ಣುಹಂಪಲು ಅಂಗಡಿ, ಹಾಲು-ಡೈರಿ ಉತ್ಪನ್ನಗಳ ಮಾರಾಟದ ಅಂಗಡಿಗಳು, ಮಾಂಸ, ಮೀನು ಮಾರಾಟ ಕೇಂದ್ರಗಳು ಹಾಗೂ ಶೇಂದಿ ಅಂಗಡಿಗೆ ಈ ನಿರ್ಬಂಧದಿಂದ ವಿನಾಯತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News