ಕೋವಿಡ್ ನಿಯಮ ಉಲ್ಲಂಘಿಸಿ ತರಗತಿ ನಡೆಸಿದ ಆರೋಪ: ಇಲಾಖಾಧಿಕಾರಿಗಳ ತಂಡದಿಂದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಪರಿಶೀಲನೆ

Update: 2021-05-04 17:09 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 4:ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೋವಿಡ್ ಕರ್ಫ್ಯೂ ವಿಧಿಸಿದ್ದರೂ ಕೂಡ ನಗರದ ಹೊರವಲಯದ ವಳಚ್ಚಿಲ್ ಪದವಿನ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ತರಗತಿ ನಡೆಸಿದ ಮತ್ತು ಮಕ್ಕಳನ್ನು ಹೆತ್ತವರ ವಶಕ್ಕೆ ಒಪ್ಪಿಸದ ಆರೋಪದ ಮೇರೆಗೆ ಸರಕಾರಿ ಇಲಾಖಾಧಿಕಾರಿಗಳ ತಂಡವೊಂದು ಸೋಮವಾರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಸುಮಾರು 2,500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಇಲ್ಲಿ ಕೋವಿಡ್ ನಿಯಮದ ಪಾಲನೆಯೇ ಆಗುತ್ತಿಲ್ಲ. ಸ್ಯಾನಿಟೈಸರ್ ಇಲ್ಲ, ಮಾಸ್ಕ್ ಧರಿಸುತ್ತಿಲ್ಲ, ಸುರಕ್ಷಿತ ಅಂತರವೂ ಇಲ್ಲ. ಕೋವಿಡ್ ತಪಾಸಣೆಯೂ ಮಾಡುತ್ತಿಲ್ಲ. ನಮಗೆ ನಮ್ಮ ಮಕ್ಕಳ ಆರೋಗ್ಯ ಮುಖ್ಯ. ಅವರನ್ನು ಬಿಟ್ಟುಕೊಡಿ. ಸೋಂಕಿನ ಹಾವಳಿ ಕಡಿಮೆಯಾದ ಬಳಿಕ ಮಕ್ಕಳನ್ನು ಕಳುಹಿಸಿಕೊಡುವೆವು ಎಂದು ಒತ್ತಾಯಿಸಿ ಎ.29ರಂದು ಬೇರೆ ಬೇರೆ ಕಡೆಯಿಂದ ಬಂದ ಹಲವು ಪೋಷಕರು ಕಾಲೇಜಿನ ಮುಂದೆ ಧರಣಿ ನಡೆಸಿದ್ದರು. ಆ ಬಳಿಕ ಕೆಲವು ವಿದ್ಯಾರ್ಥಿಗಳನ್ನು ಹೆತ್ತವರ ವಶಕ್ಕೆ ಒಪ್ಪಿಸಲಾಗಿತ್ತು. ಅಲ್ಲದೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಕಾಲೇಜಿನಲ್ಲಿ ಇನ್ನೂ ನೂರಾರು ವಿದ್ಯಾರ್ಥಿಗಳಿದ್ದು, ಅವರ ಪೋಷಕರು ಈಗಲೂ ಕಾಲೇಜಿನ ಮುಂದೆ ಆಗಮಿಸುತ್ತಲೇ ಇದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದೆ.

ಈ ಮಧ್ಯೆ ಸ್ಥಳೀಯ ಕೆಲವು ಮಂದಿ ಹೊರ ಊರಿನಿಂದ ಬರುವ ನೀವು ಕಾಲೇಜಿನ ಗೇಟಿನ ಮುಂದೆ ಜಮಾಯಿಸಿ ಕೊರೋನ ರೋಗ ಹರಡಲು ಕಾರಣರಾಗುತ್ತಿದ್ದೀರಿ. ಹಾಗಾಗಿ ಕಾಲೇಜಿನೊಳಗೆ ಪ್ರವೇಶಿಸಿ ನಿಮ್ಮ ಅಹವಾಲು ಸಲ್ಲಿಸಿ ಎಂದು ವಿದ್ಯಾರ್ಥಿಗಳ ಪೋಷಕರ ಮೇಲೆ ಒತ್ತಡ ಹೇರಿದ ಘಟನೆಯೂ ನಡೆದಿದೆ.

ಈ ಮಧ್ಯೆ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಪೊಲೀಸ್ ಆಯುಕ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಮಂಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮರಿಯೆಟ್ ಜೆ. ಮಸ್ಕರೇಂನ್ಹಸ್, ಕಿಟ್ಟೆಲ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಠಲ ಎ., ಮಂಗಳೂರು ನಗರ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಿಸಿಬಿ ಎಸ್ಸೈ ಪ್ರದೀಪ್ ಟಿ.ಆರ್., ಸಿಸಿಬಿ ಎಎಸ್ಸೈ ಹರೀಶ್, ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ರೇವತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯ ಪರವಾಗಿ ರವಿಕಿರಣ್‌ರನ್ನು ಒಳಗೊಂಡ ತಂಡ ಸೋಮವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲದೆ ಮಂಗಳವಾರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಸರಕಾರದ ಆದೇಶ ಉಲ್ಲಂಘಿಸಿಲ್ಲ: ಸಂಸ್ಥೆಯ ಹೇಳಿಕೆ

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಸಂಸ್ಥೆ ಎಂದೂ ಉಲ್ಲಂಘಿಸಿಲ್ಲ. ಎ.22ರಿಂದ ಯಾವುದೇ ತರಗತಿ ಅಥವಾ ಶೈಕ್ಷಣಿಕ ಚಟುವಟಿಕೆಯನ್ನು ನಡೆಸಿಲ್ಲ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ. ಅಲ್ಲದೆ ಸಂಸ್ಥೆಯ ಮೇಲೆ ಮಾಡಿರುವ ಆರೋಪ ಕೂಡ ನಿರಾಧಾರ ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಯಥಾ ಪ್ರಕಾರ ಪಾಲಿಸಲಾಗಿದೆ. ಲಾಕ್‌ಡೌನ್‌ಗಿಂತ ಮೊದಲು ಬಂದ ಪೋಷಕರೊಂದಿಗೆ ಸುಮಾರು 1,500 ವಿದ್ಯಾರ್ಥಿಗಳನ್ನು ಅವರ ಮನೆಗೆ ಕಳುಹಿಸಲಾಗಿದೆ. ಬಳಿಕ ಬಂದ ಪೋಷಕರಿಗೆ ಅವರ ಮಕ್ಕಳನ್ನು ಒಪ್ಪಿಸಬೆಕಾದರೆ ಸರಕಾರದ ಕಠಿಣ ಆದೇಶವನ್ನು ಉಲ್ಲಂಘಿಸಬೇಕಾಗುತ್ತದೆ. ಕಾನೂನು ಉಲ್ಲಂಘಿಸಿ ಮಕ್ಕಳನ್ನು ಕಳುಹಿಸಿದರೆ ತನಿಖಾಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಾಗುವ ಅಪಾಯ ಇದೆ ಎಂಬ ಕಾರಣಕ್ಕಾಗಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿಲ್ಲ. ಲಾಕ್‌ಡೌನ್ ಜಾರಿಯಾದ ಬಳಿಕ ಮಕ್ಕಳನ್ನು ಕರೆದುಕೊಂಡು ಹೋಗಲು ಬರಬಾರದು ಎಂದು ಮೊದಲೇ ನಾವು ಪೋಷಕರಿಗೆ ಸೂಚಿಸಿದ್ದೆವು ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಈ ನಡುವೆ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೊರಗೆ ಹಾಕಬಾರದು ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದ ಕಾರಣ ಅದನ್ನೂ ಪಾಲಿಸಿದ್ದೇವೆ. ಆದಾಗ್ಯೂ ಕೆಲವು ಮಂದಿ ಪೋಷಕರು ಸಂಸ್ಥೆಗೆ ಯಾವುದೇ ಮುನ್ಸೂಚನೆ ನೀಡದೆ ತಮ್ಮ ಮಕ್ಕಳನ್ನು ಕೆದುಕೊಂಡು ಹೋಗಲು ಬಂದಿದ್ದರು. ಕೋವಿಡ್-19 ಸುರಕ್ಷತೆಯ ಹಿನ್ನೆಲೆಯಲ್ಲಿ ಅವರಿಗೆ ಕ್ಯಾಂಪಸ್‌ನೊಳಗೆ ನಾವು ಪ್ರವೇಶ ಕಲ್ಪಿಸಿರಲಿಲ್ಲ. ಆದಾಗ್ಯೂ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ಕೆಲವು ಪೋಷಕರ ಒತ್ತಡ ಮತ್ತು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಎ.29ರಿಂದ ಪೋಷಕರ ವಶಕ್ಕೆ ಮಕ್ಕಳನ್ನು ಬಿಟ್ಟುಕೊಡಲಾಗುತ್ತದೆ. ಈಗಲೂ ಕರೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕ್ಯಾಂಪಸ್‌ನಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದೆ.

‘ಕಾಲೇಜಿನಲ್ಲಿ ಕೋವಿಡ್-19 ನಿಯಮಾವಳಿಯ ಪಾಲನೆಯೇ ಆಗಿಲ್ಲ. ಸುರಕ್ಷಿತ ಅಂತರವೂ ಇಲ್ಲ. ಸ್ಯಾನಿಟೈಸರ್ ಕೂಡ ಇಲ್ಲ ಎಂದು ಕಾಲೇಜಿಗೆ ನಮ್ಮ ತಂಡ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಹೆಚ್ಚಿನ ಮಕ್ಕಳು ಮತ್ತು ಪೋಷಕರು ಭವಿಷ್ಯದ ಹಿತದೃಷ್ಟಿಯಿಂದ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕಾಲೇಜಿನಲ್ಲಿ ಚೈಲ್ಡ್‌ಲೈನ್ ಸಂಖ್ಯೆಯನ್ನೇ ನಮೂದಿಸಿಲ್ಲ. ಸೋಮವಾರ ಕಾಲೇಜಿಗೆ ಭೇಟಿ ನೀಡಿದಾಗ ನೂರಾರು ವಿದ್ಯಾರ್ಥಿಗಳು ಕಾಲೇಜಿನೊಳಗಿರುವುದು ಕಂಡು ಬಂದಿದೆ.

ರೆನ್ನಿ ಡಿಸೋಜ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News