ಒಂದೇ ಬಾರಿ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

Update: 2021-05-05 03:57 GMT
ಸಾಂದರ್ಭಿಕ ಚಿತ್ರ

ಮಾಲಿ, ಮೇ 5: ಮಾಲಿ ದೇಶದ ಮಹಿಳೆಯೊಬ್ಬರು ಮೊರಾಕ್ಕೊದಲ್ಲಿ ಮಂಗಳವಾರ ಒಂಭತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇದು ವೈದ್ಯಕೀಯ ಜಗತ್ತಿನಲ್ಲಿ ವಿರಳಾತಿವಿರಳ ಪ್ರಕರಣವಾಗಿದೆ. ಮಹಿಳೆ ಒಂಭತ್ತು ಮಕ್ಕಳಿಗೆ ಜನ್ಮ ನೀಡಿರುವುದನ್ನು ಮಾಲಿ ಸರ್ಕಾರ ಪ್ರಕಟಿಸಿದೆ. ಆದರೆ ಮೊರಾಕ್ಕೊ ಅಧಿಕಾರಿಗಳು ಇದನ್ನು ಇನ್ನೂ ದೃಢಪಡಿಸಿಲ್ಲ.

ತೀರಾ ಬಡ ಪಶ್ಚಿಮ ಆಫ್ರಿಕನ್ ದೇಶವಾದ ಮಾಲಿಯ ಸರ್ಕಾರಿ ವಿಮಾನಯಾನ ಉದ್ಯೋಗಿಯಾಗಿದ್ದ 25 ವರ್ಷದ ಹಲೀಮಾ ಸಿಸ್ಸೆ ಎಂಬ ಮಹಿಳೆ ಉತ್ತಮ ವೈದ್ಯಕೀಯ ಸೇವೆ ಬಯಸಿ ಮಾರ್ಚ್ 30ರಂದು ಮೊರಾಕ್ಕೊಗೆ ತೆರಳಿದ್ದರು. ಈಕೆಯ ಗರ್ಭದಲ್ಲಿ ಏಳು ಶಿಶುಗಳಿವೆ ಎಂದು ನಂಬಲಾಗಿತ್ತು. ಏಳು ಮಕ್ಕಳಿಗೆ ಜನ್ಮನೀಡುವುದೇ ಅಪರೂಪ. ಅಂಥದ್ದರಲ್ಲಿ ಒಂಭತ್ತು ಮಕ್ಕಳಿಗೆ ಜನ್ಮ ನೀಡುವುದು ಇನ್ನೂ ವಿರಳವಾಗಿದೆ. ಆದರೆ ದೇಶದ ಆಸ್ಪತ್ರೆಯಲ್ಲಿ ಒಂಭತ್ತು ಮಕ್ಕಳನ್ನು ಹೆತ್ತ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೊರಾಕ್ಕೊ ಆರೋಗ್ಯ ಸಚಿವಾಲಯದ ವಕ್ತಾರ ರಿಚರ್ಡ್ ಕೌಧಾರಿ ಹೇಳಿದ್ದಾರೆ. ಸಿಸೇರಿಯನ್ ಹೆರಿಗೆಯಲ್ಲಿ ಸಿಸ್ಸೆ ಐದು ಮಂದಿ ಹೆಣ್ಣುಮಕ್ಕಳು ಮತ್ತು ನಾಲ್ವರು ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಮಾಲಿ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

"ಇದುವರೆಗೆ ಮಕ್ಕಳು ಹಾಗೂ ತಾಯಿ ಕ್ಷೇಮವಾಗಿದ್ದಾರೆ" ಎಂದು ಮಾಲಿ ಆರೋಗ್ಯ ಸಚಿವ ಫಂಟಾ ಸಿಬಿ ಹೇಳಿದ್ದಾರೆ. ಸಿಸ್ಸಿ ಜತೆಗೆ ಮೊರಾಕ್ಕೊಗೆ ತೆರಳಿದ್ದ ಆಕೆಯ ವೈದ್ಯ ಈ ಮಾಹಿತಿ ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಮಹಿಳೆ ಮತ್ತು ಮಕ್ಕಳು ಬದುಕಿ ಉಳಿಯುವ ಸಾಧ್ಯತೆಯ ಬಗ್ಗೆ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಸಂಶಯ ವ್ಯಕ್ತಪಡಿಸಿವೆ. ಈ ಅಪರೂಪದ ಹೆರಿಗೆ ಮಾಡಿಸಿದ ಮೊರಾಕ್ಕೊ ವೈದ್ಯರ ತಂಡಕ್ಕೆ ಸಿಬಿ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News