ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳ ಸಾವು ನರಮೇಧಕ್ಕಿಂತ ಕಡಿಮೆಯೇನಲ್ಲ: ಅಲಹಾಬಾದ್ ಹೈಕೋರ್ಟ್

Update: 2021-05-05 06:53 GMT

ಅಲಹಾಬಾದ್: ಆಕ್ಸಿಜನ್ ಪೂರೈಕೆಯ ಹೊಣೆಗಾರಿಕೆ ಹೊತ್ತ ಪ್ರಾಧಿಕಾರಗಳಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗದೆ ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳ ಸಾವು 'ನರಮೇಧಕ್ಕಿಂತ ಕಡಿಮೆಯೇನಲ್ಲ' ಎಂದು ಅಲಹಾಬಾದ್ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಲಕ್ನೋ ಮತ್ತು ಮೀರತ್ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ವರದಿಗಳನ್ನು ಉಲ್ಲೇಖಿಸಿ ನ್ಯಾಯಾಲಯ ಮೇಲಿನಂತೆ ಪ್ರತಿಕ್ರಿಯಿಸಿದೆಯಲ್ಲದೆ ಪ್ರಕರಣಗಳ ಕುರಿತಂತೆ ತನಿಖೆಗೆ ಆದೇಶಿಸಿದೆ.

ಉತ್ತರ ಪ್ರದೇಶದಲ್ಲಿ ಕೋವಿಡ್ ಸಮಸ್ಯೆ ಹಾಗೂ ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಕುರಿತಂತೆ ಮೇಲಿನ ಆದೇಶವನ್ನು ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮ ಹಾಗೂ ನ್ಯಾಯಮೂರ್ತಿ ಅಜಿತ್ ಕುಮಾರ್ ಅವರ ದ್ವಿಸದಸ್ಯ ಪೀಠ ನೀಡಿದೆ.

"ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗದೆ ಕೋವಿಡ್ ರೋಗಿಗಳು ಸಾವನ್ನಪ್ಪುತ್ತಿರುವುದನ್ನು ತಿಳಿದು ನಮಗೆ ನೋವುಂಟಾಗಿದೆ, ಇದು ಕ್ರಿಮಿನಲ್ ಕೃತ್ಯ,'' ಎಂದೂ ನ್ಯಾಯಾಲಯ ಹೇಳಿದೆ. "ವಿಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಹಾಗೂ ಹೃದಯ ಕಸಿ ಮತ್ತು ಮೆದುಳಿನ ಶಸ್ತ್ರಕ್ರಿಯೆಗಳೂ ನಡೆಯತ್ತಿರುವಂತಹ ಇಂದಿನ ಕಾಲದಲ್ಲಿ ನಮ್ಮ ಜನರಿಗೆ ಈ ರೀತಿ ಸಾಯಲು ನಾವು ಹೇಗೆ ಬಿಡಬಹುದು?'' ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ಸುದ್ದಿಗಳ ಕುರಿತಂತೆ 48 ಗಂಟೆಗಳೊಳಗೆ ತನಿಖೆ ನಡೆಸಿ ಮುಂದಿನ ವಿಚಾರಣೆ ದಿನಾಂಕದಂದು ವರದಿ ನೀಡುವಂತೆ ನ್ಯಾಯಾಲಯ ಲಕ್ನೋ ಹಾಗೂ ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News