×
Ad

ಹೊರಜಿಲ್ಲೆಯ ಕಾರ್ಮಿಕರಿಗೆ ಮಾನವೀಯತೆಯ ಹಸ್ತ: ತಮ್ಮ ಮನೆಯಲ್ಲೇ ಆಶ್ರಯ ನೀಡಿದ ಸಚಿನ್ ಭಿಡೆ

Update: 2021-05-06 13:48 IST

ಮಂಗಳೂರು, ಮೇ 6: ಪರಿಸರಾಸಕ್ತರಾಗಿ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ಸಚಿನ್ ಭಿಡೆ ಈ ಬಾರಿ ಹೊರಜಿಲ್ಲೆಯ ಸುಮಾರು 20 ಕಾರ್ಮಿಕರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ.

ಸಚಿನ್ ಭಿಡೆಯವರ ಮನೆಯಿಂದ ಸುಮಾರು ಒಂದು ಕಿ.ಮೀ. ದೂರ ಕಾಪು ಎಂಬಲ್ಲಿ ಮಜಲು ಕಿಂಡಿ ಅಣೆಕಟ್ಟಿನ ದುರಸ್ತಿ ಕಾಮಗಾರಿಯನ್ನು ನಡೆಸುತ್ತಿರುವ ಕಾರ್ಮಿಕರು ಆಶ್ರಯವಿಲ್ಲದೆ ಕಂಗಾಲಾಗಿದ್ದರು.  ಕೇರಲ ಮೂಲ ಗುತ್ತಿಗೆದಾರರಿಂದ ನಡೆಸಲ್ಪಡುವ ಈ ಕಾಮಗಾರಿಯಲ್ಲಿ ಪುರುಷರು ಮಹಿಳೆಯರಿದ್ದು, ಅವರ ಮಕ್ಕಳೂ ಇದ್ದಾರೆ. ಕಠಿಣ ಕರ್ಫ್ಯೂ ಆರಂಭವಾಗುವ ಮೊದಲು ಗುತ್ತಿಗೆದಾರರು ಕಾಮಗಾರಿ ಪ್ರದೇಶದಿಂದ ಸುಮಾರು ಏಳೆಂಟು ಕಿ.ಮೀ. ದೂರದಲ್ಲಿ ಈ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ಕರ್ಫ್ಯೂ ಬಳಿಕ ಈ ಕಾರ್ಮಿಕರು ಅತ್ತ ತಮ್ಮ ಊರಿಗೂ ಹೋಗಲಾಗದೆ, ಇತ್ತ ಕಾಮಗಾರಿಯತ್ತ ದಿನಾ ಹೋಗಿ ಬರಲು ಸಾಧ್ಯವಾಗದೆ ಅತಂತ್ರರಾಗಿದ್ದರು. ಅವರ ಈ ಸಮಸ್ಯೆಯನ್ನು ಮನಗಂಡ, ಸರಕಾರದ ಕಾಮಗಾರಿಯೂ ಮುಖ್ಯವೆಂದು ಪರಿಗಣಿಸಿ ಕಾರ್ಮಿಕರಿಗೆ ಮ್ಮ ಮನೆಯಲ್ಲಿಯೇ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ವಿಶಾಲವಾದ ತಮ್ಮ ಮನೆಯಲ್ಲಿ ವಿದ್ಯುತ್, ಅಡುಗೆ ಮನೆ, ಪ್ರತ್ಯೇಕ ಕುಟುಂಬಗಳಿಗೆ ಬೇರೆ ಬೇರೆ ಕೊಠಡಿ ಹಾಗೂ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇದಲ್ಲದೆ ಮನೆ ಎದುರು ಟೆಂಟ್‌ಗಳನ್ನು ಕೂಡಾ ಹಾಕಿ ಕಾರ್ಮಿಕರಿಗೆ ವ್ಯವಸ್ಥೆ ಮಾಡಿ ಕೊಡಲಾಗಿದೆ. ತಮ್ಮ ಮನೆಯನ್ನು ಕಾರ್ಮಿಕರಿಗೆ ನೀಡಿ, ಅಲ್ಲಿಂದ ಸುಮಾರು ಒಂದು ಕಿ.ಮೀ. ದೂರದ ತಮ್ಮ ಇನ್ನೊಂದು ಮನೆಯಲ್ಲಿ ಸಚಿನ್ ಭಿಡೆ ನೆಲೆಸಿದ್ದಾರೆ.

‘‘ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗಿದ್ದರೆ ಕಿಂಡಿ ಅಣೆಕಟ್ಟಿನ ದುರಸ್ತಿ ಕಾಮಗಾರಿ ಸ್ಥಗಿತಗೊಳ್ಳುತ್ತಿತ್ತು. ಮಳೆಯೂ ಸುರಿಯುತ್ತಿರುವುದರಿಂದ ಈಗಾಗಲೇ ಆಗಿರುವ ಕಾಮಗಾರಿಗಳೂ ನಿಷ್ಪ್ರಯೋಜಕವಾಗುತ್ತಿತ್ತು. ಹಾಗಾಗಿ ಕಾರ್ಮಿಕರಿಗೆ ಮನೆಯಲ್ಲಿ ಅವಕಾಶ ನೀಡಲಾಗಿದೆ. ಕಾರ್ಮಿಕರು ಕೋವಿಡ್ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಇವರಿಗೆ ಬೇಕಾಗುವ ಆಹಾರ, ಔಷಧಿಯನ್ನೂ ವ್ಯವಸ್ಥೆ ಮಾಡಲಾಗುತ್ತಿದೆ. ಕಾಮಗಾರಿ ಕೆಲ ದಿನಗಳಲ್ಲೇ ಪೂರ್ಣಗೊಳ್ಳಲಿದೆ. ಊರಿಗೆ ಹೋಗಲು ವಾಹನ ವ್ಯವಸ್ಥೆ ಆಗದಿದ್ದರೆ ಮುಂದೆಯೂ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿನ್ ಭಿಡೆ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News