"ಮಾಧ್ಯಮಗಳ ವಿರುದ್ಧ ದೂರು ನೀಡುವುದು ಬಿಟ್ಟು ನೀವು ಉತ್ತಮವಾಗಿ ಕಾರ್ಯ ನಿರ್ವಹಿಸಿ"
ಹೊಸದಿಲ್ಲಿ: ಮಾಧ್ಯಮಗಳ ಕುರಿತು ದೂರಿ ಅವುಗಳ ಮೇಲೆ ನಿರ್ಬಂಧ ವಿಧಿಸುವಂತೆ ಕೇಳುವ ಬದಲು ಸಂವಿಧಾನಾತ್ಮಕ ಪ್ರಾಧಿಕಾರಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಚುನಾವಣಾ ಆಯೋಗಕ್ಕೆ ಮಾತಿನ ಛಾಟಿಯೇಟು ಬೀಸಿದೆ.
ಕೋವಿಡ್ ನಡುವೆ ರಾಜಕೀಯ ರ್ಯಾಲಿಗಳಿಗೆ ಅನುಮತಿ ನೀಡಿದ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ವಿರೋಧಿಸಿ ನ್ಯಾಯಾಲಯಗಳು ನೀಡುವ ಮೌಖಿಕ ಅಭಿಪ್ರಾಯಗಳನ್ನು ಮಾಧ್ಯಮಗಳು ವರದಿ ಮಾಡುವುದಕ್ಕೆ ತಡೆ ಹೇರಬೇಕೆಂದು ಕೋರಿ ಆಯೋಗ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.
"ಸಂವಿಧಾನದ 19ನೇ ವಿಧಿ ಕೇವಲ ನಾಗರಿಕರಿಗೆ ಮಾತ್ರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿಲ್ಲ, ಅದು ಮಾಧ್ಯಮಕ್ಕೂ ಈ ಹಕ್ಕು ನೀಡಿದೆ, ಮಾಧ್ಯಮವನ್ನು ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಅದೇ ಸಮಯ ಮದ್ರಾಸ್ ಹೈಕೋರ್ಟ್ ಅಭಿಪ್ರಾಯಗಳು ಕಠೋರ ಹಾಗೂ ನ್ಯಾಯಾಂಗದಲ್ಲಿ ಸಂಯಮವು ಅಗತ್ಯ ಏಕೆಂದರೆ ಕೆಲವೊಂದು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ" ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ಹೇಳಿದೆ.