×
Ad

ಅಮಾಯಕ ಹನಿಬಾಬು ಜೈಲಿನಲ್ಲಿ ಒಂಭತ್ತು ತಿಂಗಳು ಕಳೆದಿದ್ದಾರೆ, ದಯವಿಟ್ಟು ಅವರನ್ನು ಬಿಡುಗಡೆ ಮಾಡಿ: ಕುಟುಂಬದ ಮನವಿ

Update: 2021-05-06 15:26 IST
 ಫೋಟೊ ಕೃಪೆ: twitter.com/Udayindiaonline

ಹೊಸದಿಲ್ಲಿ,ಮೇ 6: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಲ್ಲೋರ್ವರಾಗಿರುವ ದಿಲ್ಲಿ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಹನಿಬಾಬು ಅಮಾಯಕರಾಗಿದ್ದು,ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅವರ ಕುಟುಂಬವು ಮನವಿ ಮಾಡಿಕೊಂಡಿದೆ. ಪ್ರಕರಣದಲ್ಲಿಯ ಆರೋಪಿಗಳ ವಿರುದ್ಧದ ಸಾಕ್ಷಾಧಾರಗಳನ್ನು ಅವರ ಕಂಪ್ಯೂಟರ್ನಲ್ಲಿ ಅವರಿಗೆ ಗೊತ್ತಿಲ್ಲದೇ ಸೇರಿಸಲಾಗಿದೆ ಎಂದು ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ಬಯಲಾಗಿದ್ದರೂ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ಈ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ ಎಂದು ಬಾಬು ಕುಟುಂಬವು ಹೇಳಿದೆ. ಬಾಬು ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು 2020,ಜು.28ರಂದು ಬಂಧಿಸಿತ್ತು.

ಅಮಾಯಕ ಹನಿಬಾಬು ಈಗಾಗಲೇ ವಿಚಾರಣಾಧೀನ ಕೈದಿಗಳಿಂದ ಕಿಕ್ಕಿರಿದು ತುಂಬಿರುವ ಮುಂಬೈ ಜೈಲಿನಲ್ಲಿ ಅನ್ಯಾಯವಾಗಿ ಒಂಭತ್ತು ತಿಂಗಳುಗಳನ್ನು ಕಳೆದಿದ್ದಾರೆ. ಬಂಧನಕ್ಕೆ ಮುನ್ನ ಮುಂಬೈನಲ್ಲಿ ಐದು ದಿನಗಳ ಕಾಲ ನಡೆದಿದ್ದ ಅರ್ಥಹೀನ ವಿಚಾರಣೆ ಸಂದರ್ಭದಲ್ಲಿ ಹನಿಬಾಬು ಪ್ರಕರಣದಲ್ಲಿ ಸಾಕ್ಷಿಯಾಗುವಂತೆ ಮತ್ತು ಇತರ ಬಂಧಿತರ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ತನ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಅಧಿಕಾರಿಗಳು ಬಲವಂತಗೊಳಿಸುತ್ತಿದ್ದಾರೆ ಎಂದು ತಮಗೆ ತಿಳಿಸಿದ್ದರು. 

ಇತರರನ್ನು ಸುಳ್ಳೇ ಪ್ರಕರಣದಲ್ಲಿ ಸಿಲುಕಿಸಲು ಅವರು ನಿರಾಕರಿಸಿದ್ದರಿಂದ ಎನ್ಐಎ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ಅವರು ತನ್ನ ಸ್ವಂತ ಮೊಬೈಲ್ ಫೋನ್ನಿಂದ ಮಾಡಿದ್ದ ಕೊನೆಯ ಕರೆಯು ಸೂಚಿಸಿತ್ತು ಎಂದು ಮನವಿಗೆ ಅಂಕಿತ ಹಾಕಿರುವ ಹನಿಬಾಬು ಅವರ ತಾಯಿ ಫಾತಿಮಾ,ಪತ್ನಿ ಜೆನಿ, ಪುತ್ರಿ ಫರ್ಝಾನಾ ಹಾಗೂ ಸೋದರರಾದ ಹಾರಿಸ್ ಮತ್ತು ಅನ್ಸಾರಿ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೈಲಿನಲ್ಲಿಯ ಪರಿಸ್ಥಿತಿಗಳ ಬಗ್ಗೆಯೂ ಬಾಬು ಕುಟುಂಬ ಕಳವಳವನ್ನು ವ್ಯಕ್ತಪಡಿಸಿದೆ. ಇದು ಪ್ರಾಥಮಿಕ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗಿದೆ. ಸಾಂಕ್ರಾಮಿಕದ ನೆಪದಲ್ಲಿ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಆರಂಭದಿಂದಲೂ ನಮಗೆ ಅವಕಾಶವನ್ನು ನಿರಾಕರಿಸಲಾಗಿದೆ. 

ಪುಸ್ತಕಗಳನ್ನು ಒಳಗೊಂಡಿರುವ ಪಾರ್ಸಲ್ಗಳನ್ನು ಸ್ವೀಕರಿಸಲೂ ಅವರಿಗೆ ಅವಕಾಶವನ್ನು ನೀಡಲಾಗುತ್ತಿಲ್ಲ ಎನ್ನುವುದು ನಮ್ಮನ್ನ ಹತಾಶರನ್ನಾಗಿಸಿದೆ. ಪತ್ರವನ್ನು ಕಳುಹಿಸುವುದು/ಸ್ವೀಕರಿಸುವುದು ಮತ್ತು ಫೋನ್ ಕರೆಗಳನ್ನು ಮಾಡುವುದು ಸಹ ಸಂಬಂಧಿತ ಅಧಿಕಾರಿಗಳ ಮರ್ಜಿಯನ್ನು ಅವಲಂಬಿಸಿರುವಂತಿದೆ ಎಂದು ಅದು ಹೇಳಿದೆ.

ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳದಿರುವುದು ಬಹುದೊಡ್ಡ ತಪ್ಪಾಗುತ್ತದೆ ಮತ್ತು ಭೀಮಾ ಕೋರೆಗಾಂವ ಪ್ರಕರಣದಲ್ಲಿಯೂ ಇಂತಹುದೇ ತಪ್ಪನ್ನು ಎಸಗುತ್ತಿರುವಂತೆ ಕಾಣುತ್ತಿದೆ ಎಂದು ಮನವಿಯು ಬೆಟ್ಟು ಮಾಡಿದೆ.

ಅಂಬೇಡ್ಕರ್ವಾದಿಯಾಗಿರುವ ಬಾಬು ಜಾತಿ ವಿರೋಧಿ ಹೋರಾಟಗಳು ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವುದು ಅವರ ಏಕಮೇವ ‘ಅಪರಾಧ ’ವಾಗಿದೆ. ದಿಲ್ಲಿ ವಿವಿಯಲ್ಲಿ ಒಬಿಸಿ ಮೀಸಲಾತಿ ಜಾರಿಗೊಳಿಸಲು ಮತ್ತು ಎಸ್ಸಿ/ಎಸ್ಟಿಗಳಿಗೆ ತಾರತಮ್ಯವನ್ನು ಕೊನೆಗಾಣಿಸಲು ಪಟ್ಟು ಬಿಡದೇ ಹೋರಾಡಿದ್ದ ಆರಂಭದ ಕೆಲವೇ ಜನರಲ್ಲಿ ಅವರು ಒಬ್ಬರಾಗಿದ್ದರು. ಪ್ರೊ.ಜಿ.ಎನ್ ಸಾಯಿಬಾಬಾ ಅವರ ರಕ್ಷಣೆ ಮತ್ತು ಬಿಡುಗಡೆಗಾಗಿ ಸಮಿತಿಯಲ್ಲಿಯೂ ಅವರು ಸಕ್ರಿಯರಾಗಿದ್ದರು. ಮೀಸಲಾತಿ ಜಾರಿಗಾಗಿ ಅಥವಾ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗಾಗಿ ಪ್ರಜೆಗಳ ಹಕ್ಕುಗಳ ರಕ್ಷಣೆಗಾಗಿ ಹೋರಾಟದಂತಹ ಶಾಸನಬದ್ಧ ಚಟುವಟಿಕೆಗಳನ್ನು ಅಪರಾಧ ಮತ್ತು ಮಾವೋವಾದಿ ಸಂಪರ್ಕಗಳಿಗೆ ಪುರಾವೆ ಎಂದು ವ್ಯಾಖ್ಯಾನಿಸಿರುವುದು ಅಚ್ಚರಿಯ ಜೊತೆಗೆ ಆಘಾತವನ್ನೂ ಉಂಟು ಮಾಡಿದೆ ಎಂದು ಕುಟುಂಬವು ಹೇಳಿದೆ.

ಹನಿಬಾಬು ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷವನ್ನು ಒದಗಿಸಲು ಎನ್ಎಐಗೆ ಈವರೆಗೆ ಸಾಧ್ಯವಾಗಿಲ್ಲ,ಹೀಗಾಗಿ ಅವರ ನಾಗರಿಕ ಮತ್ತು ಶಾಸನಾತ್ಮಕ ಹಕ್ಕುಗಳ ಉಲ್ಲಂಘನೆ ಮುಂದುವರಿದಿದೆ. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎನ್ಐಎ ಸಂಗ್ರಹಿಸಿರುವ ಏಕೈಕ ಸಾಕ್ಷ ಬಂಧಿತರಲ್ಲೋರ್ವರಾಗಿರುವ ರೋನಾ ವಿಲ್ಸನ್ ಅವರ ಕಂಪ್ಯೂಟರ್ನಲ್ಲಿ ಹ್ಯಾಕರ್ ಪ್ಲಾಂಟ್ ಮಾಡಿದ್ದಾಗಿದೆ ಎನ್ನುವುದನ್ನು ಅಮೆರಿಕದ ಮಸಾಚುಸೆಟ್ಸ್ನ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆ ಆರ್ಸೆನೆಲ್ ಪುರಾವೆಗಳ ಸಹಿತ ಸಾಬೀತುಗೊಳಿಸಿದೆ. ಆದರೆ ನ್ಯಾಯಾಲಯಗಳು ಇವುಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವುದು ಅಚ್ಚರಿದಾಯಕವಾಗಿದೆ ಎಂದು ಬಾಬು ಕುಟುಂಬವು ಹೇಳಿದೆ.

ಆರೋಪಿಗಳ ವಿಚಾರಣೆಯನ್ನು ವಿಳಂಬಿಸಲು ಹಲವಾರು ತಂತ್ರಗಳನ್ನು ನಡೆಸಲಾಗುತ್ತಿದ್ದು,ಅವರನ್ನು ನ್ಯಾಯವಂಚಿತರನ್ನಾಗಿಸುವುದು ಇದರ ಉದ್ದೇಶವಾಗಿದೆ ಎಂದಿರುವ ಬಾಬು ಕುಟುಂಬವು, ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುತ್ತಿವೆ, ಆದರೆ ಇಲ್ಲಿ ಪ್ರಕರಣದಲ್ಲಿಯ ಆರೋಪಿಗಳಿಗೆ ವಯಸ್ಸಾಗಿದ್ದು, ಅನಾರೋಗ್ಯ ಪೀಡಿತರೂ ಆಗಿದ್ದರೂ ಅವರ ಜಾಮೀನು ಅರ್ಜಿಗಳನ್ನು ಪದೇಪದೇ ನಿರಾಕರಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News