ನರೇಂದ್ರ ದಾಭೋಲ್ಕರ್ ಹತ್ಯೆ: ಆರೋಪಿ ವಿಕ್ರಮ್ ಭಾವೆಗೆ ಹೈಕೋರ್ಟ್ ಜಾಮೀನು
ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು 2013 ರಲ್ಲಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ವಿಕ್ರಮ್ ಭಾವೆಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
2013 ರ ಆಗಸ್ಟ್ 20 ರಂದು ಪುಣೆಯಲ್ಲಿ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಂದ ಆರೋಪದ ಇತರ ಇಬ್ಬರು ಆರೋಪಿಗಳಾದ ಸಚಿನ್ ಅಂಡುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಭಾವೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ವಿಭಾಗೀಯ ಪೀಠವು ಭಾವೆಗೆ ಒಂದು ಲಕ್ಷ ರೂ.ಗಳ ಶೂರಿಟಿ ಮೇಲೆ ಜಾಮೀನು ನೀಡಿತು. ಪ್ರತಿದಿನ ಒಂದು ತಿಂಗಳ ಕಾಲ ಪುಣೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿತು.
ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮತ್ತು ಯಾವುದೇ ಪುರಾವೆಗಳು ಅಥವಾ ಸಾಕ್ಷಿಗಳನ್ನು ಹಾಳು ಮಾಡದಂತೆ, ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ಭಾವೆಗೆ ನಿರ್ದೇಶನ ನೀಡಿತು.
ಪ್ರಾಸಿಕ್ಯೂಟಿಂಗ್ ಏಜೆನ್ಸಿಯ ಸಿಬಿಐ ಪರ ಹಾಜರಾದ ವಕೀಲ ಸಂದೇಶ್ ಪಾಟೀಲ್ ಅವರು ಆದೇಶವನ್ನು ತಡೆಹಿಡಿಯಲು ಕೋರಿದರು. ಆದರೆ, ಹೈಕೋರ್ಟ್ ನಿರಾಕರಿಸಿತು.
ಕಲಾಸ್ಕರ್ ನೀಡಿದ ಹೇಳಿಕೆಯ ಆಧಾರದ ಮೇಲೆ ಸಿಬಿಐ 2019 ರ ಮೇ 25 ರಂದು ವಕೀಲ ಸಂಜೀವ್ ಪುಣಲೇಕರ್ ಅವರೊಂದಿಗೆ ಭಾವೆ ಅವರನ್ನು ಬಂಧಿಸಲಾಯಿತು. ಪುಣಲೇಕರ್‌ಗೆ 2019 ರ ಜೂನ್‌ನಲ್ಲಿ ಪುಣೆಯ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತು.
ಪುಣೆಯ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಭಾವೆ ಈ ವರ್ಷದ ಆರಂಭದಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದ.
ತನಿಖಾ ಏಜೆನ್ಸಿಯ ಪ್ರಕಾರ, ಭಾವೆ (ಪುಣಲೇಕರ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ) ಕಲಸ್ಕರ್ ಮತ್ತು ಸಚಿನ್ ಅಂಡುರೆ ಅವರಿಗೆ ಕೃತ್ಯದ ಬಳಿಕ ತಪ್ಪಿಸಿಕೊಳ್ಳುವ ಮಾರ್ಗವನ್ನು ತೋರಿಸಿದ್ದ.