ಗುರುಪುರ : ಕೋವಿಡ್ ನಿಯಮ ಉಲ್ಲಂಘಿಸಿದರೆ ದಂಡ

Update: 2021-05-06 11:47 GMT

ಗುರುಪುರ, ಮೇ 6: ಅನಗತ್ಯವಾಗಿ ತಿರುಗಾಡಿಕೊಂಡು ಕೋವಿಡ್ -19 ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲು ಮುಂದಾದ ಗುರುಪುರ ಗ್ರಾಪಂ ಆಡಳಿತವು ಕಟ್ಟುನಿಟ್ಟಾಗಿ ದಂಡ ಹೇರಲು ನಿರ್ಧರಿಸಿದೆ.

ಗುರುವಾರ ಪಂಚಾಯತ್ ಸಭಾಗೃಹದಲ್ಲಿ ಕೋವಿಡ್ ನಿಯಂತ್ರಣ ವಿಷಯಕ್ಕೆ ಸಂಬಂಧಿಸಿ ಸಭೆ ನಡೆಸಿದ ಆಡಳಿತವು ಜಿಲ್ಲಾಡಳಿತದ ಸೂಚನೆ ಯಂತೆ ಕೋವಿಡ್ ಬಗ್ಗೆ ಜನಜಾಗೃತಿ, ಆದೇಶ ಉಲ್ಲಂಘಿಸಿದವರ ವಿರುದ್ಧ ದಂಡ ಹೇರಿಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನ್ನೊಳಗೊಂಡ ವಿಶೇಷ ಕಾರ್ಯ ಪಡೆ ರಚಿಸಲು ನಿರ್ಧರಿಸಿತು.

ಸರಕಾರದ ಮಾರ್ಗಸೂಚಿಯನ್ವಯ ಪಂಚಾಯತ್ ವತಿಯಿಂದ ಕೋವಿಡ್ ರೋಗಿಗಳಿಗಾಗಿ ತಾತ್ಕಾಲಿಕ ಚಿಕಿತ್ಸಾಲಯ ತೆರೆಯಲು ಅವಕಾಶ ವಿಲ್ಲ. ಆದರೆ ಕುಟುಂಬಿಕರಿಂದ ತಿರಸ್ಕರಿಸಲ್ಪಡುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಪಂಚಾಯತ್ ಕೇಂದ್ರದಲ್ಲಿ ಊಟೋಪಚಾರದ ವ್ಯವಸ್ಥೆಗೆ ಅವಕಾಶವಿರುವ ಬಗ್ಗೆ ತಹಶೀಲ್ದಾರರು ವಿವರಿಸಿದ್ದಾರೆ. ಅಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಗ್ರಾಮಕ್ಕೆ ಆಗಮಿಸುವವರ ಬಗ್ಗೆ ನಿಗಾ ಇಡ ಬೇಕು. ಈ ನಿಟ್ಟಿನಲ್ಲಿ ಗ್ರಾಮಮಟ್ಟದ ಕಾರ್ಯಪಡೆ ಕಾರ್ಯಪ್ರವೃತ್ತವಾಗಬೇಕಾಗುತ್ತದೆ ಎಂದು ಪಂಚಾಯತ್ ಪಿಡಿಒ ಅಬೂಬಕ್ಕರ್ ತಿಳಿಸಿದರು.

ಮಾಸ್ಕ್ ಧರಿಸದವರು, ಅವಧಿ ಮೀರಿ ಅಂಗಡಿ ತೆರೆದಿಡುವವರು (ಹಿಂದಿನ ಬಾಗಿಲು ತೆರೆದಿಟ್ಟು ವ್ಯವಹಾರ ನಡೆಸುವವರು), ಅವಧಿ ಮೀರಿದ ಬಳಿಕ ದಿನಸಿ ಅಂಗಡಿಗಳಲ್ಲಿ ಹಾಲಿನೊಂದಿಗೆ ಇತರ ವ್ಯವಹಾರ ನಡೆಸುವವರ ವಿರುದ್ಧ ಪಂಚಾಯತ್ ಆಡಳಿತ ದಂಡ ಹಾಗೂ ಎಫ್‌ಐಆರ್ ದಾಖಲಿಸಲಿದೆ ಎಂದು ಪಿಡಿಒ ಸ್ಪಷ್ಟಪಡಿಸಿದರು.

ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ದಿಲ್‌ಶಾದ್ ಎ, ಕಾರ್ಯದರ್ಶಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News