×
Ad

ಬಿಜೆಪಿಯಿಂದ ತೇಜಸ್ವಿ ಸೂರ್ಯ ಮೂಲಕ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ: ಅಬ್ದುಲ್ ಅಝೀಝ್ ಉದ್ಯಾವರ ಆರೋಪ

Update: 2021-05-06 17:47 IST
ಅಬ್ದುಲ್ ಅಝೀಝ್ ಉದ್ಯಾವರ

ಉಡುಪಿ : ಕರೋನ ನಿರ್ವಣೆಯ ಸಂಪೂರ್ಣ ವೈಫಲ್ಯದ ಕಾರಣ ಚಾಮರಾಜನಗರದ 28 ಜನರ ಸಾವು ಅಲ್ಲದೆ ರಾಜ್ಯಾದ್ಯಂತ ಅರೋಗ್ಯ ವ್ಯವಸ್ಥೆಯಲ್ಲಿ ದೌರ್ಬಲ್ಯಗಳಿಂದ ಉಂಟಾಗಿರುವ ಜನಾಕ್ರೋಶದಿಂದ ಅಲುಗಾಡುತ್ತಿರುವ ರಾಜ್ಯ ಸರಕಾರವನ್ನು ಉಳಿಸಲು, ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್'ನ ಮೇಲೆ ಬೆಡ್ ಬ್ಲಾಕಿಂಗ್ ವಿರುದ್ಧ ನಕಲಿ ಕಾರ್ಯಾಚರಣೆಯನ್ನು ಸಂಸದ ತೇಜಸ್ವಿ ಸೂರ್ಯ ಜೊತೆ ಶಾಸಕ ಸತೀಶ ರೆಡ್ಡಿ ಮತ್ತು ರವಿಸುಬ್ರಹ್ಮಣ್ಯರೊಂದಿಗೆ ನಡೆಸಿ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದೇ ಹಳಸಲು ಕೋಮುದ್ವೇಷ ಅಸ್ತ್ರವನ್ನು ತನ್ನ ಬತ್ತಳಿಕೆಯಿಂದ ಹೊರತೆಗೆದಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಆರೋಪಿಸಿದ್ದಾರೆ.

ಈ ಕಾರ್ಯಾಚರಣೆ ನಕಲಿ ಎಂಬುದು ಈಗಾಗಲೇ ಸಾಬೀತಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈ ಮೂವರ ಪೈಕಿ ಖುದ್ದು ಸತೀಶ ರೆಡ್ಡಿಯೇ ಬೆಡ್ ಬ್ಲಾಕಿಂಗ್'ನಲ್ಲಿ ನೇರವಾಗಿ ಶಾಮೀಲಾಗಿರುವುದು ವಿಜಯ ಕರ್ನಾಟಕ ದಿನಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಬೆಳಕಿಗೆ ತಂದಿದೆ. ಅಕ್ರಮ ಬೆಡ್ ಬ್ಲಾಕಿಂಗ್'ಗೆ ಸಂಬಂಧಪಟ್ಟಂತೆ ಈ ಮೂವರೊಂದಿಗೆ ಇನ್ನೂ 5 ಜನ ಮುಸ್ಲಿಮೇತರರೂ ಇದುವರೆಗೆ ಬಂಧಿಸಲ್ಪಟಿದ್ದಾರೆ.

206 ಸಿಬ್ಬಂದಿಯಿರುವ ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್'ನ ಪಟ್ಟಿಯಿಂದ ಕೇವಲ 17 ಮುಸ್ಲಿಮರ ಹೆಸರನ್ನು ದುರುದ್ದೇಶ ಪೂರ್ವಕವಾಗಿ ಹೆಕ್ಕಿತೆಗೆದು ಸಾಲು ಸಾಲಾಗಿ ಓದಿಹೇಳಿ ತನ್ನ ಸಂಕುಚಿತತೆಯನ್ನು ಹೊರಹಾಕಿದ್ದಾರೆ. ಬಿಜೆಪಿ ಸರಕಾರದ ವಿರುದ್ಧ ಸಿಡಿದೆದ್ದ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನಷ್ಟೇ ಸಂಸದ ತೇಜಸ್ವಿ ಸೂರ್ಯ ಮಾಡಿದ್ದಾರೆ ಅಝೀಝ್ ಉದ್ಯಾವರ ತಿಳಿಸಿದರು.

ದುರುದ್ದೇಶ ಪೂರ್ವಕವಾಗಿ ಮುಸ್ಲಿಮರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕೋಮು ಸಾಮರಸ್ಯಕ್ಕೆ ಭಂಗ ತಂದು ಕೋಮು ಗಲಭೆಗೆ ಪ್ರಚೋದನೆ ಕೊಟ್ಟ ತೇಜಸ್ವಿಯ ಬಂಧನವಾಗಬೇಕು. ಈ ಸಂಕಷ್ಟದ ಸಂದರ್ಭದಲ್ಲಿ ಕೋಮು ಪ್ರಚೋದನೆಯಿಂದ ಉದ್ರಿಕ್ತರಾದವರಿಂದ ಕೋಮುಗಲಭೆಗಳು ಆಗಿದ್ದಿದ್ದರೆ ಸರಕಾರಕ್ಕೆ ನಿಯಂತ್ರಿಸಲಾಗುತ್ತಿತ್ತೇ ? ಎಂಬುದನ್ನು ಈ ಸಮಯದಲ್ಲಿ ಗಮನಕ್ಕೆ ತೆಗೆದುಕೊಳ್ಳುವುದು ಸೂಕ್ತ. ಇದೊಂದು ಗಂಭೀರ ವಿಷಯವಾಗಿದ್ದು ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಬ್ದುಲ್ ಅಝೀಝ್ ಉದ್ಯಾವರ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News