ಕೋವಿಡ್ ಕರ್ಫ್ಯೂ; ಮೇ 7ರಿಂದ ಬೆಳಗ್ಗೆ 6-9ರೊಳಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಮೇ 6 : ದ.ಕ.ಜಿಲ್ಲೆಯಲ್ಲಿ ಮೇ 7ರಿಂದ ಬೆಳಗ್ಗೆ 6ರಿಂದ 9ರೊಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ನಿಗ್ರಹಕ್ಕಾಗಿ ಕಠಿಣ ನಿಯಮ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಹಾಗಾಗಿ 9 ಗಂಟೆಯೊಳಗೆ ಸಾಮಗ್ರಿ ಖರೀದಿಸಬೇಕು ಮತ್ತು 10 ಗಂಟೆಯೊಳಗೆ ಅಂಗಡಿ ವ್ಯಾಪಾರಿಗಳು ಹಾಗೂ ಗ್ರಾಹಕರು ಮನೆ ಸೇರಬೇಕು. ಸಮಯ ಮೀರಿ ಒಡಾಡಿದರೆ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಔಷಧ ಖರೀದಿಗೆ ಸಮೀಪದ ಮೆಡಿಕಲ್ ಗಳಿಗೆ ತೆರಳಬೇಕು. ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಮೇ.15ರ ಬಳಿಕ ಯಾವ ಕಾರ್ಯಕ್ರಮಗಳಿಗೂ ಜಿಲ್ಲೆಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸಹಿತ ಯಾವ ಕಾರ್ಯಕ್ರಮವನ್ನೂ ಆಯೋಜಿಸುವಂತಿಲ್ಲ. ಮೇ.15ರ ಬಳಿಕ ಈಗಾಗಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ. ಕಾರ್ಯಕ್ರಮ ನಿಗದಿಪಡಿಸಿದವರು ಮುಂದೂಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.