×
Ad

ಚುನಾವಣಾ ನಂತರದ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾನೆಂದು ಇಂಡಿಯಾ ಟುಡೇ ಪತ್ರಕರ್ತನ ಫೋಟೊ ಪ್ರಕಟಿಸಿದ ಬಂಗಾಳ ಬಿಜೆಪಿ

Update: 2021-05-06 19:13 IST

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದ ಬಳಿಕ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಹಲವಾರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿಗರು ಕೊಲೆಗೈಯುತ್ತಿದ್ದಾರೆ ಎಂದು ಸಾಮಾಜಿಕ ತಾಣದಾದ್ಯಂತ ಪ್ರಚಾರ ಮಾಡಲಾಗಿತ್ತು. ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸುಳ್ಳುಸುದ್ದಿಯನ್ನು ಪ್ರಕಟಿಸಿ ಸಾಮಾಜಿಕ ತಾಣದಾದ್ಯಂತ ಅಪಹಾಸ್ಯಕ್ಕೀಡಾಗಿದೆ.

ಚುನಾವಣಾ ಬಳಿಕದ ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಎಂದು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಇಂಡಿಯಾ ಟುಡೇ ಮಾಧ್ಯಮದ ಪತ್ರಕರ್ತನ ಫೋಟೊವನ್ನು ಬಳಸಿರುವ ಕುರಿತು ವ್ಯಾಪಕ ಟೀಕೆ ಎದುರಾಗಿದೆ. ಈ ಹಿಂದೆ ಬಂಗಾಳದಲ್ಲಿ ನಡೆದ ಮತದಾನದ ಹಿಂಸಾಚಾರಕ್ಕೆ ಬಲಿಯಾದ 9 ಜನರ ಹೆಸರನ್ನು ಬಿಜೆಪಿ ಹಂಚಿಕೊಂಡಿತ್ತು ಮತ್ತು ಅವರಲ್ಲಿ ಸಿಟಾಲ್ಕುಚಿಯಲ್ಲಿ ಕೊಲ್ಲಲ್ಪಟ್ಟ ಮೋನಿಕ್ ಮೊಯಿತ್ರೊ ಮತ್ತು ಮಿಂಟು ಬರ್ಮನ್ ಎಂಬವರ ಫೊಟೊ ಮತ್ತು ಹೆಸರನ್ನು ಉಲ್ಲೇಖಿಸಲಾಗಿತ್ತು. ಮೋನಿಕ್‌ ಮೋಯಿತ್ರೊ ಹೆಸರಿನಲ್ಲಿ ಇಂಡಿಯಾ ಟುಡೇ ಪತ್ರಕರ್ತ ಅಬ್ರೋ ಬ್ಯಾನರ್ಜಿಯ ಫೋಟೊವನ್ನು ಬಳಸಲಾಗಿತ್ತು ಎಂದು indiatoday.in ವರದಿ ಮಾಡಿದೆ.

"ಅಬ್ರೋ ಬ್ಯಾನರ್ಜಿಯವರ ಫೋಟೊವನ್ನು ವೀಡಿಯೋದಲ್ಲಿ ತಪ್ಪಾಗಿ ಸೇರಿಸಲಾಗಿತ್ತು" ಎಂದು ಆ ಬಳಿಕ ಬಿಜೆಪಿ ಸ್ಪಷ್ಟೀಕರಣ ನೀಡಿದೆ ಎಂದು ವರದಿ ಉಲ್ಲೇಖಿಸಿದೆ. ಈ ವೀಡಿಯೋವನ್ನು ಬಳಿಕ ಫೇಸ್ಬುಕ್‌ ಮತ್ತು ಟ್ವಿಟರ್‌ ನಿಂದ ತೆಗೆದು ಹಾಕಲಾಗಿದೆ.

ನಾನು ಬೆಳಗ್ಗೆ ಕೊಂಚ ತಡವಾಗಿ ಎಚ್ಚರಗೊಂಡಿದ್ದೆ. ನನ್ನ ಮೊಬೈಲ್‌ ನಲ್ಲಿ ೧೦೦ಕ್ಕೂ ಹೆಚ್ಚು ಮಿಸ್‌ ಕಾಲ್‌ ಗಳಿತ್ತು. ಏನಾಯಿತು ಎಂದು ನಾನು ಪರಿಶೀಲಿಸುವ ಮುಂಚೆಯೇ ನನ್ನ ಸ್ನೇಹಿತ ಅರವಿಂದ್‌, ಮಾಣಿಕ್‌ ಮೊಯಿತ್ರೊ ಬದಲಿಗೆ ನಿನ್ನ ಚಿತ್ರವನ್ನು ಬಿಜೆಪಿ ಐಟಿ ಸೆಲ್‌ ಬಳಸಿಕೊಂಡಿದೆ ಎಂದು ಆತ ತಿಳಿಸಿದ. ನಾನು ಸಿಟಾಲ್ಕುಚ್ಚಿಯಿಂದ 1೪೦೦ಕಿ.ಮೀ ದೂರ ಇದ್ದೇನೆ. ಈ ವಿಚಾರ ನಿಜಕ್ಕೂ ಆಘಾತಕಾರಿಯಾಗಿದೆ ಮತ್ತು ನನಗೆ ಸಾಕಷ್ಟು ಹಾನಿಯುಂಟು ಮಾಡಿದೆ" ಎಂದು ಅಬ್ರೋ ಬ್ಯಾನರ್ಜಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News