ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಲು ಐವನ್ ಡಿಸೋಜ ಆಗ್ರಹ
ಮಂಗಳೂರು, ಮೇ 6: ರಾಜ್ಯದಲ್ಲಿ ಕೊರೋನ ಸೋಂಕಿತರನ್ನು ಬದುಕಿಸಲು ಆರೋಗ್ಯ ಮೂಲಭೂತ ಸೌಕರ್ಯಗಳ ಕೊರತೆ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಯೋಜಕತ್ವದಲ್ಲಿ ಕೊರೋನ ಸೋಂಕಿತರ ಮರಣಗಳು ಸಂಭವಿಸುತ್ತಿದೆ. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ, ಗುಲ್ಭರ್ಗ ಮತ್ತಿತ್ತರ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸರಕಾರದ ಪ್ರಯೋಜಕತ್ವದಲ್ಲಿ ಕೊಲೆಗಳು ನಡೆಯುತ್ತಿದ್ದು, ಇದನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರಕಾರ ಸಂಪೂರ್ಣ ವಾಗಿ ವಿಫಲಗೊಂಡಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ 24 ಮರಣಗಳು ನಡೆದಿದ್ದರೆ ಸರಕಾರ ಯಾವ ಕ್ರಮ ಕೈಗೊಳ್ಳುತಿತ್ತು?. ಸರಕಾರಿ ಆಸ್ಪತ್ರೆ ಗಳಲ್ಲಿ ನಡೆದಾಗ ಇದು ಕೇವಲ ತನಿಖೆಗೆ ಮೀಸಲೇ ಹೊರತು ಜವಾಬ್ದಾರಿ ಮತ್ತು ಹೊಣೆಗಾರಿಕೆಗೆ ಮೀಸಲು ಆಗಿಲ್ಲವೇ?. ಮುಖ್ಯಮಂತ್ರಿ, ಆರೋಗ್ಯ ಸಚಿವರು, ಹೊಣೆಗಾರಿಕೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ತನಿಖಾ ವರದಿ ಬೇಕೇ? ಇಂತಹ ಅನೇಕ ಪ್ರಶ್ನೆಗಳು ಜನ ಸಾಮಾನ್ಯರಿಗೆ ಇರುವುದರಿಂದ ಪ್ರಸ್ತುತ ನಡೆಯುವ ವಿದ್ಯಮಾನಗಳಿಂದ ರಾಜ್ಯದ ಜನತೆ ಸರಕಾರದ ಮೇಲೆ ವಿಶ್ವಾಸವನ್ನು ಕಳೆದುಗೊಂಡಿದೆ. ಕೊರೋನ ವೈರಾಣುವನ್ನು ಎದುರಿಸುವ ಯಾವ ಸಾಮರ್ಥ್ಯವನ್ನೂ ರಾಜ್ಯ ಸರಕಾರ ಪ್ರಾಮಾಣಿಕತೆಯಿಂದ ಮಾಡುತ್ತಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ. ಆದುದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೋನ ಸೋಂಕಿತರನ್ನು ಸಾವಿನಿಂದ ಬದುಕಿಸಲು ಕೂಡಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ, ಸಾಧ್ಯವಿರುವ ಎಲ್ಲ ಮೂಲಗಳಿಂದ ಕೊರೋನ ರೋಗವನ್ನು ಎದುರಿಸಲು ಕ್ರಮಕೈಗೊಳ್ಳಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಪ್ರಪಂಚದ್ಯಾದಂತ ಕಳುಹಿಸಿರುವ ಆರೋಗ್ಯದ ಸಾಮಗ್ರಿಗಳು, ಆಕ್ಸಿಜನ್‌ಗಳು ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ರಾಶಿ ಬಿದ್ದಿರುವುದು ವರದಿಯಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಕಳುಹಿಸಿದ ಆರೋಗ್ಯ ಪರಿಕರಗಳು ಎಷ್ಟು? ಪಿಎಂ ಕೇರ್ ನಿಧಿಯಿಂದ ಎಷ್ಟು ಹಣ ಬಂದಿದೆ? ಕೇಂದ್ರ ಸರಕಾರ ನೀಡಿದ ಅನುದಾನ ಎಷ್ಟು?. ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಈ ಬಗ್ಗೆ ಮುಖ್ಯಮಂತ್ರಿ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಐವನ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಪ್ರಕಾಶ್ ಸಾಲ್ಯಾನ್, ಆರೀಫ್ ಬಾವಾ, ವಿವೇಕ್ ರಾಜ್ ಪೂಜಾರಿ, ಮುಹಮ್ಮದ್ ಕುಂಜತ್ತಬೈಲ್, ಪಧ್ಮನಾಭ ಅಮೀನ್, ಎಂ.ಪಿ.ಮನುರಾಜ್, ಆಶೀತ್ ಪಿರೇರಾ, ದೀಕ್ಷಿತ್ ಅತ್ತಾವರ ಮತ್ತಿತರರು ಉಪಸ್ಥಿತರಿದ್ದರು.