×
Ad

ಉಡುಪಿ: ಕೋವಿಡ್‌ಗೆ ಒಂದೇ ದಿನದಲ್ಲಿ ಆರು ಬಲಿ; 1526 ಮಂದಿಯಲ್ಲಿ ಕೊರೋನ ಸೋಂಕು ದೃಢ

Update: 2021-05-06 21:14 IST
ಸಾಂದರ್ಭಿಕ ಚಿತ್ರ

ಉಡುಪಿ, ಮೇ 6: ಜಿಲ್ಲೆಯಲ್ಲಿ ಗುರುವಾರ ಆರು ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 1526 ಮಂದಿ ಒಂದೇ ದಿನದಲ್ಲಿ ಪಾಸಿಟಿವ್ ಬಂದಿದ್ದಾರೆ. ನಿನ್ನೆ ಸಹ ಜಿಲ್ಲೆಯಲ್ಲಿ 1656 ಮಂದಿ ಸೋಂಕಿತರು ಕಂಡುಬಂದಿದ್ದರು.

ಗುರುವಾರ ಒಟ್ಟು ಆರು ಮಂದಿ ಹಿರಿಯ ನಾಗರಿಕರು ಕೋವಿಡ್‌ಗೆ ಬಲಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 212ಕ್ಕೇರಿದೆ. ದಿನದಲ್ಲಿ 384 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5061ಕ್ಕೆ ನೆಗೆದಿದೆ.

ಉಡುಪಿ ತಾಲೂಕಿನ ನಾಲ್ವರು (87, 69, 72, 47ವರ್ಷ), ಕಾರ್ಕಳ (62 ಬೈಲೂರು) ಮತ್ತು ಕುಂದಾಪುರ (64 ವರ್ಷ) ತಾಲೂಕಿನ ತಲಾ ಒಬ್ಬರು ಮೃತರಲ್ಲಿ ಸೇರಿದ್ದಾರೆ. ಮೃತರದಲ್ಲಿ ನಾಲ್ವರು ಪುರುಷರಾದರೆ, ಇಬ್ಬರು ಮಹಿಳೆಯರು. ಮೃತರಲ್ಲಿ ಮೂವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗಳಲ್ಲಿ, ಇಬ್ಬರು ಮಣಿಪಾಲ ಹಾಗೂ ಒಬ್ಬರು ಉಡುಪಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರು.

ಅಜ್ಜರಕಾಡಿನ 87 ವರ್ಷ ಪ್ರಾಯದ ವೃದ್ಧರು ಮಣಿಪಾಲ ಆಸ್ಪತ್ರೆಯಲ್ಲಿ ಎ.13ರಿಂದ ಸೋಂಕಿನ ವಿರುದ್ಧ ಹೋರಾಡಿ ನಿನ್ನೆ ಮೃತಪಟ್ಟರೆ, ಸಾಸ್ತಾನದ 69 ವರ್ಷ ಪ್ರಾಯದ ಹಿರಿಯ ನಾಗರಿಕರು ಮೇ 1ರಂದು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಇಂದು ಮುಂಜಾನೆ ಮೃತಪಟ್ಟರು. ಕಟಪಾಡಿಯ 47 ವರ್ಷ ಪ್ರಾಯದ ಮಹಿಳೆ ಹಾಗೂ ಹಾರಾಡಿಯ 72 ಹರೆಯದ ಪುರುಷರು ಉಡುಪಿ ಮತ್ತು ಬ್ರಹ್ಮಾವರದ  ಆಸ್ಪತ್ರೆಗಳಲ್ಲಿ ನಿನ್ನೆ ಮೃತಪಟ್ಟರು.

ಇಂದು ಪಾಸಿಟಿವ್ ಬಂದ 1526 ಮಂದಿಯಲ್ಲಿ 817 ಮಂದಿ ಪುರುಷ ರಾದರೆ, ಉಳಿದ 709 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 682, ಕುಂದಾಪುರ ತಾಲೂಕಿನ 595 ಹಾಗೂ ಕಾರ್ಕಳ ತಾಲೂಕಿನ 242 ಮಂದಿ ಇದ್ದು, ಉಳಿದ ಏಳು ಮಂದಿ ಹೊರಜಿಲ್ಲೆಗಳಿಂದ ವಿವಿಧ ಕಾರಣಗಳ ಮೇಲೆ ಉಡುಪಿಗೆ ಆಗಮಿಸಿದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಬುಧವಾರ 384 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 31,619 ಕ್ಕೇರಿದೆ. ನಿನ್ನೆ ಜಿಲ್ಲೆಯ 3095 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 1526 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 36,892 ಆಗಿದೆ ಎಂದು ಡಾ.ಸೂಡ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,20,490 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಗುರುವಾರ ಜಿಲ್ಲೆಯಲ್ಲಿ ಒಟ್ಟು 340 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇವರಲ್ಲಿ 75 ಮಂದಿ ಮೊದಲ ಹಾಗೂ 265 ಮಂದಿ ಎರಡನೇ ಡೋಸ್ ಪಡೆದರು. ಇವರಲ್ಲಿ 45 ವರ್ಷ ಮೇಲಿನ 259 ಮಂದಿ ಇದ್ದರೆ ಉಳಿದವರು ಆರೋಗ್ಯ ಕಾರ್ಯಕರ್ತರು (44) ಹಾಗೂ ಕೊರೋನ ಮುಂಚೂಣಿ ಯೋಧರು (37) ಎಂದು ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News