×
Ad

ವಾರದೊಳಗೆ ರೆಮಿಡಿಸಿವರ್ ನೀಡಿದರೆ ಮಾತ್ರ ಪರಿಣಾಮಕಾರಿ: ಡಾ.ಶಶಿ ಕಿರಣ್

Update: 2021-05-06 21:17 IST

ಉಡುಪಿ, ಮೇ 6: ಕೊರೋನ ಸೋಂಕಿತರಿಗೆ ಒಂದು ವಾರದೊಳಗೆ ರೆಮಿಡಿಸಿವರ್ ಇಂಜೆಕ್ಷನ್ ನೀಡಿದರೆ ಪರಿಣಾಮಕಾರಿಯಾಗಿರುತ್ತದೆ. ಒಂದು ವಾರದಿಂದ 10 ದಿನಗಳೊಳಗೆ ನೀಡಿದರೆ ಪರಿಣಾಮ ಆಗಲೂ ಬಹುದು ಆಗದೇ ಇರಲೂ ಬಹುದು. 10 ದಿನಗಳ ನಂತರ ನೀಡಿದರೆ ಯಾವುದೇ ಪ್ರಯೋಜನ ಆಗುವು ದಿಲ್ಲ. ಆದುದರಿಂದ ರೋಗದ ಲಕ್ಷ್ಮಣ ಕಂಡುಬಂದ ತಕ್ಷಣವೇ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಅಗತ್ಯ ಎಂದು ಉಡುಪಿ ಡಾ.ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಶಶಿ ಕಿರಣ್ ಉಮಾಕಾಂತ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಉಡುಪಿಯ ಐಎಂಎ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ‘ತಿಂಗಳ ಮಾಧ್ಯಮ ಸಂವಾದ’ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಕೋವಿಡ್ ಸೋಂಕಿತ ಆರಂಭದ 5 ದಿನಗಳೊಳಗೆ ಸ್ಟಿರಾಯಿಡ್ ತೆಗೆದು ಕೊಳ್ಳುವುದು ಬಹಳ ಅಪಾಯಕಾರಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಕಾರಣಕ್ಕೂ ಆ್ಯಂಟಿ ಬಯೋಟಿಕ್, ಸ್ಟಿರಾಯಿಡ್‌ನ್ನು ತೆಗೆದುಕೊಳ್ಳಬಾರದು. ರಕ್ತದಲ್ಲಿ ಆಕ್ಸಿಜನ್ ಪ್ರಮಾಣವನ್ನು ಆಕ್ಸಿಮೀಟರ್ ಮೂಲಕ ಪರಿಶೀಲನೆ ಮಾಡ ಬೇಕು. ಶೇ.94ಕ್ಕಿಂತ ಕಡಿಮೆ ಆಕ್ಸಿಜನ್ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಆಸ್ಪತ್ರೆಗೆ ತೆರಳುವವರೆಗೆ ಕವುಚಿ ಮಲಗಿದರೆ ಆಕ್ಸಿಜನ್ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಮಾರಣಾಂತಿಕ ವೈರಸ್ ಅಲ್ಲ: ಕೊರೋನ ಮಾರಣಾಂತಿಕ ವೈರಸ್ ಅಲ್ಲ. ಇದರಿಂದ ಶೇ.95ರಷ್ಟು ಮಂದಿ ಗುಣಮುಖರಾಗಿದ್ದಾರೆ. ಶೇ.5-8ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತದೆ. ಅದರಲ್ಲಿ ಶೇ.1ರಷ್ಟು ಮಂದಿ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಅವರು ಹೇಳಿದರು.

ಈಗ ಕೊರೋನದಿಂದ ಮೃತಪಟ್ಟವರ ಮೃತದೇಹವನ್ನು ಪೊಲೀಸರು, ಸರಕಾರದ ಬದಲು ಆಯಾ ಸಂಬಂಧಿಕರಿಗೆ ನೀಡಲಾಗುತ್ತದೆ. ಅವರು ಮನೆಗೆ ತೆಗೆದುಕೊಂಡು ಹೋಗದೆ ನೇರವಾಗಿ ಅಂತ್ಯಕ್ರಿಯೆ ನಡೆಸಬೇಕು. ಸುರಕ್ಷತಾ ಕ್ರಮಗಳಿಂದ ಅಂತ್ಯಕ್ರಿಯೆ ನಡೆಸುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದರು.

ತಲೆ ತಗ್ಗಿಸುವಂತಾಗಿದೆ: ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರ ಶೇಖರ್ ಮಾತನಾಡಿ, ಮೊದಲ ಅಲೆ ಎದುರಿಸಿ ಎದೆ ತಟ್ಟಿಕೊಂಡ ನಾವು ಎರಡನೇ ಅಲೆಯಲ್ಲಿ ತಲೆ ತಗ್ಗಿಸುವಂತಾ ಗಿದೆ. ಇದಕ್ಕೆ ಸರಕಾರ ಮಾತ್ರವಲ್ಲದೆ ಜನರು ಕೂಡ ಕಾರಣ ರಾಗಿದ್ದಾರೆ. ಆದುದರಿಂದ ಮೂರನೇ ಅಲೆ ತಡೆಯು ವುದಕ್ಕಾಗಿ ಮುಂದಿನ ಒಂದೂವರೆ ವರ್ಷಗಳ ಕಾಲ ಜನರು ಎಲ್ಲ ಕಾರ್ಯ ಕ್ರಮಳಿಂದ ದೂರ ಉಳಿಯಬೇಕು ಎಂದರು.

ಐಎಂಎ ಜಿಲ್ಲಾ ಸಂಯೋಜಕ ಹಾಗೂ ಸರ್ಜನ್ ಡಾ.ವೈ.ಸುದರ್ಶನ್ ರಾವ್ ಮಾತನಾಡಿ, ಚಿಕಿತ್ಸೆ ಸೌಲಭ್ಯಗಳನ್ನು ಉನ್ನತಿಕರಣಗೊಳಿಸು ವುದರಿಂದ ಮತ್ತು ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಕೊರೋನಾ ತೀವ್ರತೆಯನ್ನು ಎದುರಿಸಬಹುದಾಗಿದೆ. ತಜ್ಞ ವೈದ್ಯರಲ್ಲದೆ ಸರ್ಜನ್, ನೇತ್ರತಜ್ಞ ಸೇರಿದಂತೆ ಇತರ ವೈದ್ಯರು ಕೂಡ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು, ಮಾನಸಿಕ ತಜ್ಞ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿದರು. ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಐಎಂಎ ಉಡುಪಿ ಕರಾವಳಿ ಕಾರ್ಯದರ್ಶಿ ಡಾ.ಪ್ರಕಾ್ ಭಟ್ ಕಾರ್ಯಕ್ರಮ ನಿರೂಪಿಸಿದರು.

2ನೇ ಡೋಸ್ ಪಡೆಯದಿದ್ದರೂ ಸಮಸ್ಯೆ ಇಲ್ಲ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಹೆಚ್ಚು ವ್ಯಾತ್ಯಾಸ ಇಲ್ಲ. ಮೊದಲ ಡೋಸ್ ತೆಗೆದುಕೊಂಡ ಬಳಿಕ ಎರಡನೇ ಡೋಸ್‌ಗೆ ಅವಧಿ ಮುಗಿದರೂ ಯಾವುದೇ ಅಡ್ಡ ಪರಿಣಾಮ ಇಲ್ಲ. ಕೇವಲ ಒಂದೇ ಡೋಸ್ ನೀಡಿದ್ದರೆ ಕಡಿಮೆ ರೋಗ ನಿರೋಧಕ ಶಕ್ತಿ ಸಿಕ್ಕಿದರೆ, ಎರಡು ಡೋಸ್ ತೆಗೆದು ಕೊಂಡರೆ ಹೆಚ್ಚು ದೊರೆಯುತ್ತದೆ. ಆದರೆ ಡೋಸ್ ತೆಗೆದುಕೊಂಡ ಬಳಿಕವೂ ಸೋಂಕು ತಗಲುವ ಸಾಧ್ಯತೆ ಕೂಡ ಇದೆ. ಆದರೆ ಅಷ್ಟೊಂದು ತೀವ್ರವಾಗಿರದೆ ಸೌಮ್ಯವಾಗಿರುತ್ತದೆ. ಆದುದರಿಂದ ಮುನ್ನೆಚ್ಚರಿಕೆ ವಹಿಸುವುದು ಅತಿ ಅಗತ್ಯ ಎಂದು ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದರು.

ಎಲ್ಲರಿಗೂ ಸೀಟಿಸ್ಕಾನ್ ಅಗತ್ಯ ಇಲ್ಲ

ವ್ಯಕ್ತಿಯ ದೇಹದಲ್ಲಿ ಸೋಂಕು ಎಷ್ಟು ವ್ಯಾಪಿಸಿದೆ ಎಂಬುದನ್ನು ಪತ್ತೆ ಮಾಡಲು ಸೀಟಿ ಸ್ಕಾನ್ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಮಾತ್ರ ಸೀಟಿ ಸ್ಕಾನ್ ಮಾಡ ಲಾಗುವುದು. ಎಲ್ಲ ಕೊರೋನ ಸೋಂಕಿತರಿಗೆ ಸೀಟಿ ಸ್ಕಾನ್ ಮಾಡುವ ಅಗತ್ಯ ಇಲ್ಲ ಮತ್ತು ಮಾಡಲೂಬಾರದು ಎಂದು ಡಾ.ಶಶಿಕಿರಣ್ ಉಮಾ ಕಾಂತ್ ಹೇಳಿದರು.

ಸದ್ಯ ಜಿಲ್ಲೆಯಲ್ಲಿರುವ ಆಕ್ಸಿಜನ್ ಸ್ಟಾಕ್ ಎರಡು ಮೂರು ದಿನಗಳಿಗೆ ಬೇಕಾಗುವಷ್ಟು ಇರುತ್ತದೆ. ಪೂರೈಕೆ ಸರಿಯಾಗಿ ಆಗುತ್ತಿದ್ದರೆ ಯಾವುದೇ ಕೊರತೆ ಆಗುವುದಿಲ್ಲ ಎಂದ ಅವರು, ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ಪರಿಣಾಮಕಾರಿಯಾದ ಮಾರ್ಗವಾಗಿದೆ. ಆದರೆ ಅದರಿಂದ ಜನಜೀವನ, ಕಾರ್ಮಿಕರ ಮೇಲೆ ಅಷ್ಟೆ ಅಡ್ಡ ಪರಿಣಾಮ ಕೂಡ ಆಗುತ್ತದೆ. ಆದರೆ ಇಂತಹ ಸಮಯದಲ್ಲಿ ಜನ ಪ್ರಾಣ ಉಳಿಸುುದು ಮುಖ್ಯ ವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News