ಕೋವಿಡ್ ಕರ್ಫ್ಯೂ ; ಬಿಗಿ ಕ್ರಮಗಳು ಪ್ರಾಯೋಗಿಕವಾಗಿರಲಿ: ಡಿವೈಎಫ್‌ಐ
ಮಂಗಳೂರು, ಮೇ 6: ದ.ಕ. ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸಿದೆ. ಆದರೆ ಈ ಸಂದರ್ಭ ಅತಿರೇಕಗಳು ಸಂಭವಿಸದಂತೆ ಪ್ರಾಯೋಗಿಕ ಕಾರ್ಯಯೋಜನೆ ರೂಪಿಸಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಕೊರೋನ್ ಪಾಸಿಟಿವ್ ಪ್ರಕರಣಗಳು ದಿನಂಪ್ರತಿ ಸಾವಿರ ದಾಟುತ್ತಿರುವ ಕಳವಳಕಾರಿ ಸಂದರ್ಭದಲ್ಲಿ ಜಿಲ್ಲಾಡಳಿತ ರಾಜ್ಯ ಸರಕಾರದ ಮಾರ್ಗಸೂಚಿಯನ್ನೂ ಮೀರಿ ಕಠಿಣ ನಿರ್ಬಂಧಗಳನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಮಧ್ಯಾಹ್ನ 12 ಗಂಟೆಯವರಗೆ ಅಗತ್ಯ ವಸ್ತುಗಳ ಖರೀದಿ, ಓಡಾಟಕ್ಕೆ ಅವಕಾಶವಿದ್ದರೆ, ಜಿಲ್ಲೆಯಲ್ಲಿ ಅದನ್ನು ಬೆಳಗ್ಗೆ 9 ಗಂಟೆಗೆ ಮಿತಿಗೊಳಿಸಿ ನಿರ್ಬಂಧ ಹೇರಿದೆ. ಬಳಿಕ ಓಡಾಟ ನಿಯಂತ್ರಿಸಲು ಪೊಲೀಸರ ಮೂಲಕ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಸರಿಯಾದ ಗುರುತು ಚೀಟಿ ಇಲ್ಲದೆ ನಿರ್ಮಾಣ, ಉತ್ಪಾದನ ವಲಯದಲ್ಲಿ ದುಡಿಯುವವರ, ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸಹಸ್ರಾರು ಸಂಖ್ಯೆಯ ದಿನಗೂಲಿ ನೌಕರರ, ಕಾರ್ಮಿಕರ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾದಲ್ಲಿ ಈಗಾಗಲೆ ಸರಿಯಾದ ಆದಾಯವಿಲ್ಲದೆ ಕಂಗೆಟ್ಟಿರುವ ಜನರು ಹಸಿವಿನ ದವಡೆಗೆ ಸಿಲುಕಲಿದ್ದಾರೆ. ರಾಜ್ಯ ಸರಕಾರ ಯಾವುದೇ ಪರಿಹಾರ ಪ್ಯಾಕೇಜ್ ಘೋಷಿಸದೆ ಇರುವ ಸಂದರ್ಭ ಜಿಲ್ಲಾಡಳಿತದ ಇಂತಹ ಕಠಿಣ ಕ್ರಮಗಳು ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.