ಕೊರೋನ ನಿಯಂತ್ರಣಕ್ಕೆ ಸಕಲ ಕ್ರಮ: ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ

Update: 2021-05-06 17:30 GMT

ಬಂಟ್ವಾಳ, ಮೇ 6: ಪುದು ಗ್ರಾಮ ಪಂಚಾಯತ್ ನ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಪರಿಶೀಲನಾ ಸಭೆ ಶಾಸಕ ಯು.ಟಿ.ಖಾದರ್ ಅವರ ನಿರ್ದೇಶನದಂತೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮದಲ್ಲಿ ಸಕ್ರಿಯ ಕೊರೋನ ಸೋಂಕಿತರ ಸಂಖ್ಯೆಯ ಬಗ್ಗೆ ವಿವರಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಕೊರೋನ ನಿಯಂತ್ರಣಕ್ಕೆ ಪಂಚಾಯತ್ ನಿಂದ ಸಕಲ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಮನೆಯಿಂದ ಹೊರಗಡೆ ಬಾರದಂತೆ ಜಾಗೃತಿ ಮೂಡಿಸುವ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರ ಪರೀಕ್ಷೆ ನಡೆಸುವ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಪುದು ಗ್ರಾಮದ ಫರಂಗಿಪೇಟೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ದಿನಸಿ, ತರಕಾರಿ, ಮೀನು ಮಾರುಕಟ್ಟೆಯನ್ನು ಹೊಂದಿದೆ.‌ ಕರ್ಫ್ಯೂ ಸಮಯದಲ್ಲಿ ಅಗತ್ಯ ಸಾಮಗ್ರಿಗಳ ಖರೀದಿಯ ವೇಳೆ ಗ್ರಾಹಕರು ಗುಂಪು ಸೇರದಂತೆ ಮಾಡಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೋವಿಡ್ ನಿಯಮ ಉಲ್ಲಂಘಿಸುವ ಗ್ರಾಹಕರಿಗೆ ಯಾವುದೇ ವಸ್ತುಗಳನ್ನು ನೀಡದಂತೆ ಅಂಗಡಿಗಳ ಮಾಲಕರಿಗೆ ಸೂಚಿಸಲಾಗಿದೆ ಎಂದರು. 

ನೋಡೆಲ್ ಅಧಿಕಾರಿ ಜ್ಞಾನೇಶ್ ಅವರು ಕಾರ್ಯಪಡೆಯ ಸದಸ್ಯರಿಗೆ ಮಾಹಿತಿ ಹಾಗೂ ಮಾರ್ಗ ದರ್ಶನ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಅವರು ಕಾರ್ಯಪಡೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. 

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದರ್ಶನ್, ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಗ್ರಾಮ ಪಂಚಾಯತ್ ಸದಸ್ಯರು, ಆಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪಂಚಯತ್ ಸಿಬ್ಬಂದಿ ಉಪಸ್ಥಿತರಿದ್ದರು. 

ಕಳೆದ ವಾರ ನಿಧನರಾದ ಮಾಜಿ ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆಯೂ ಆದ ಹಾಲಿ ಸದಸ್ಯೆ ಲಕ್ಷ್ಮೀ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News