ಕಾರ್ಕಳ, ಹೆಬ್ರಿಯಲ್ಲಿ ಗಾಳಿ-ಮಳೆಗೆ ಹತ್ತಾರು ಮನೆಗಳಿಗೆ ಭಾರೀ ಹಾನಿ

Update: 2021-05-07 12:31 GMT

ಉಡುಪಿ, ಮೇ 7: ಕಾರ್ಕಳ ಮತ್ತು ಹೆಬ್ರಿ ತಾಲೂಕಿನಾದ್ಯಂತ ಗುರುವಾರ ಸಂಜೆ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ಹತ್ತಾರು ಮನೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಲಕ್ಷಾಂತರ ರೂ.ನಷ್ಟ ಉಂಟಾದ ಬಗ್ಗೆ ವರದಿ ಯಾಗಿದೆ.

ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಶೇಖರ ಪೂಜಾರಿ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಶೋಭಾ ಡಿ.ಪುತ್ರನ್, ಅದೇ ಗ್ರಾಮದ ಕೊರಗ ಮೂಲ್ಯ, ಕಾರ್ಕಳ ಕಸಬಾ ಗ್ರಾಮದ ಶಂಕರ ಕಾಮತ್, ಮಹಾಲಕ್ಷ್ಮೀ ಶೆಣೈ, ಶ್ರೀನಿವಾಸ ಹೆಗ್ಡೆ , ನಿರ್ಮಲಾ ಹಾಗೂ ಗ್ರೇಸಿ ಮತ್ತು ದುರ್ಗಾ ಗ್ರಾಮದ ವೆಂಕಟೇಶ ಮರಾಠೆ ಇವರ ವಾಸ್ತವ್ಯದ ಮನೆಗೆ ಭಾರಿ ಗಾಳಿ-ಮಳೆಯಿಂದ ಒಟ್ಟಾರೆಯಾಗಿ ಮೂರೂವರೆ ಲಕ್ಷ ರೂ.ಗಳಿಗೂ ಅಧಿಕ ಪ್ರಮಾಣ ನಷ್ಟ ಉಂಟಾಗಿದೆ.

ಇದರೊಂದಿಗೆ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೂದ ಮೇರ ಹಾಗೂ ಅದೇ ಗ್ರಾಮದ ಸುಂದರ ಹಾಗೂ ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಜಯರಾಮ ಶೆಟ್ಟಿ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸರಾಸರಿ 10.1ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೆಬ್ರಿಯಲ್ಲಿ 28.0ಮಿ.ಮೀ, ಕಾರ್ಕಳದಲ್ಲಿ 19ಮಿ.ಮೀ., ಉಡುಪಿಯಲ್ಲಿ 8, ಕುಂದಾಪುರ ದಲ್ಲಿ 6, ಬಹ್ಮಾವರ ಮತ್ತು ಕಾಪುವಿನಲ್ಲಿ ತಲಾ 4ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News