×
Ad

ಉಡುಪಿ : ಸತತ ಎರಡನೇ ದಿನ ಕೋವಿಡ್‌ಗೆ ಆರು ಬಲಿ; 977 ಮಂದಿಯಲ್ಲಿ ಕೊರೋನ ಸೋಂಕು

Update: 2021-05-07 21:33 IST

ಉಡುಪಿ, ಮೇ 7: ಕೋವಿಡ್-19ರ ಎರಡನೇ ಅಲೆಗೆ ಉಡುಪಿ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಆರು ಮಂದಿ ಬಲಿಯಾಗಿದ್ದಾರೆ. ಇದರಿಂದ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ 218ಕ್ಕೇರಿದೆ. ಒಟ್ಟು 977 ಮಂದಿ ಶುಕ್ರವಾರ ಹೊಸದಾಗಿ ಕೊರೋನ ಪಾಸಿಟಿವ್ ಬಂದಿದ್ದಾರೆ.

ದಿನದಲ್ಲಿ 783 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಈಗ 5249ಕ್ಕೆ ನೆಗೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಮೃತ ಪಟ್ಟ ಆರು ಮಂದಿಯಲ್ಲಿ ಮೂವರು ಪುರುಷರು (58, 81, 85 ವರ್ಷ) ಹಾಗೂ ಮೂವರು (64, 87, 60ವರ್ಷ) ಮಹಿಳೆಯರು. ಎಲ್ಲರೂ ಐಎಲ್‌ಐ ಹಾಗೂ ಸಾರಿ ಪ್ರಕರಣಗಳೊಂದಿಗೆ ಕೋವಿಡ್‌ಗೆ ಪಾಸಿಟಿವ್ ಬಂದವರು. ಇಬ್ಬರು ಇಂದು ಮೃತಪಟ್ಟರೆ, ಮೂವರು ಗುರುವಾರ ಹಾಗೂ ಒಬ್ಬರು ಬುಧವಾರ ಮಣಿಪಾಲ, ಬ್ರಹ್ಮಾವರ (2), ಉಡುಪಿ ಖಾಸಗಿ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಕುಂದಾಪುಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಇಂದು ಪಾಸಿಟಿವ್ ಬಂದ 977 ಮಂದಿಯಲ್ಲಿ 520 ಮಂದಿ ಪುರುಷ ರಾದರೆ, ಉಳಿದ 457 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 383, ಕುಂದಾಪುರ ತಾಲೂಕಿನ 280 ಹಾಗೂ ಕಾರ್ಕಳ ತಾಲೂಕಿನ 310 ಮಂದಿ ಇದ್ದು, ಉಳಿದ ನಾಲ್ವರು ಹೊರಜಿಲ್ಲೆಗಳಿಂದ ವಿವಿಧ ಕಾರಣಗಳ ಮೇಲೆ ಉಡುಪಿಗೆ ಆಗಮಿಸಿದವರಾಗಿದ್ದಾರೆ.

ಗುರುವಾರ ದಾಖಲೆಯ 783 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 32,402ಕ್ಕೇರಿದೆ. ನಿನ್ನೆ ಜಿಲ್ಲೆಯ 2653 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದಾರೆ. ಇಂದಿನ 977 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 37,869 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,23,143 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಲಸಿಕೆ: ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 489 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇವರಲ್ಲಿ 18 ಮಂದಿ ಮೊದಲ ಹಾಗೂ 471 ಮಂದಿ ಎರಡನೇ ಡೋಸ್ ಪಡೆದರು. ಇವರಲ್ಲಿ 45 ವರ್ಷ ಮೇಲಿನ 543 ಮಂದಿ ಇದ್ದರೆ ಉಳಿದವರು ಆರೋಗ್ಯ ಕಾರ್ಯಕರ್ತರು (18) ಹಾಗೂ ಕೊರೋನ ಮುಂಚೂಣಿ ಯೋಧರು (28) ಎಂದು ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News