ಕೋವಿಡ್-19 ಅಲೆಗೆ ಧರ್ಮ, ರಾಜಕೀಯ ಬಣ್ಣ ಬೇಡ: ಮೌಲಾನ ಶಾಫಿ ಸಅದಿ

Update: 2021-05-07 16:36 GMT

ಮಂಗಳೂರು : ದೇಶದಲ್ಲಿ ಕೋವಿಡ್-19 ಎರಡನೆ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭ ಭಾರತೀಯರು ಒಗ್ಗಟ್ಟಾಗಿ ಈ ಸೋಂಕು ಎದುರಿಸಬೇಕಾಗಿದೆ. ಅದರಲ್ಲಿ ಧರ್ಮ, ರಾಜಕೀಯ ಪಕ್ಷಗಳ ಹೆಸರಿನಲ್ಲಿ ಆರೋಪ ಮಾಡಿ ಸ್ವಾರ್ಥವನ್ನು ಸಾಧಿಸಬೇಡಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್‌ಕೆಎಂ ಶಾಫಿ ಸಅದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಡಳಿತ ಪಕ್ಷವು ಈ ಮಹಾರೋಗದ ಹತೋಟಿಗೆ ಬೇಕಾದ ಕ್ರಮಗಳನ್ನು ಮಾಡಬೇಕಾಗಿದೆ. ಅದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ. ವಿರೋಧ ಪಕ್ಷಗಳು ಸರಕಾರದ ಕಾರ್ಯಾಚರಣೆಯಲ್ಲಿ ಸಹಕರಿಸಿ ಸಮರ್ಪಕವಾಗಿ ನಿರ್ವಹಣೆಯಾಗುವಂತೆ ಸರಕಾರ ವನ್ನು ಎಚ್ಚರಿಸಬೇಕಾಗಿದೆ. ವಿರೋಧಕ್ಕಾಗಿ ಮಾತ್ರ ವಿರೋಧಿಸದೆ, ಪ್ರಜೆಗಳ ಹಿತಕ್ಕಾಗಿ ಈ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಕೈಜೋಡಿಸ ಬೇಕಾಗಿದೆ ಎಂದು ತಿಳಿಸಿದ್ದಾರೆ.

ಈ ಪಿಡುಗಿಗೆ ಧರ್ಮವನ್ನು ಬರೆಸುವವರು ತಮಗೆ ಅಂಟಿದ ಧರ್ಮಾಂಧತೆಯ ಸೋಂಕನ್ನು ನಿವಾರಿಸಿ ತಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹಾಯ್ ತುರ್ತು ಸೇವಾ ತಂಡವನ್ನು ರಚಿಸಿದ್ದು, ಇದರ ಅಧೀನದಲ್ಲಿ ಕೋವಿಡ್ ಸೆಂಟರ್,ಅ್ಯಂಬುಲೆನ್ಸ್ ಸೇವೆ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ವರ್ಗದ ಜನರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದ ಶುಲ್ಕ ವಿನಾಯಿತಿ ಹಾಗೂ ರಿಯಾಯಿತಿ ವ್ಯವಸ್ಥೆಯನ್ನು ಸಹಾಯ್ ವತಿಯಿಂದ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News