ಮಾಲ್ದೀವ್ಸ್: ಬಾಂಬ್ ದಾಳಿಯಲ್ಲಿ ಮಾಜಿ ಅಧ್ಯಕ್ಷ ನಶೀದ್ ಗಂಭೀರ

Update: 2021-05-07 16:49 GMT
ಫೋಟೊ ಕೃಪೆ :twitter.com/MohamedNasheed 

ಮಾಲೆ (ಮಾಲ್ದೀವ್ಸ್), ಮೇ 7: ಮಾಲ್ದೀವ್ಸ್ ನ ಮಾಜಿ ಅಧ್ಯಕ್ಷ ಹಾಗೂ ದೇಶದ ಸಂಸತ್ನ ಹಾಲಿ ಸ್ಪೀಕರ್ ಮುಹಮ್ಮದ್ ನಶೀದ್ ಗುರುವಾರ ನಡೆದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. 53 ವರ್ಷದ ಮಾಜಿ ಅಧ್ಯಕ್ಷರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಗುರುವಾರ ರಾತ್ರಿ ರಾಜಧಾನಿ ಮಾಲೆಯಲ್ಲಿರುವ ತನ್ನ ಮನೆಯಿಂದ ಹೊರಬಂದು ಕಾರನ್ನೇರುವುದರಲ್ಲಿದ್ದರು. ಆಗ ಮೋಟರ್ ಬೈಕೊಂದರಲ್ಲಿಇರಿಸಲಾಗಿದ್ದ ಬಾಂಬ್ ಸ್ಫೋಟಿಸಿತು. ಬಾಂಬ್ ನ ಸದ್ದು ನಗರದಾದ್ಯಂತ ಅನುರಣಿಸಿತು ಎಂದು ನಿವಾಸಿಗಳು ಹೇಳಿದ್ದಾರೆ. ಹಲವಾರು ಗಂಭೀರ ಗಾಯಗಳೊಂದಿಗೆ ನಶೀದ್ರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವರಿಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ.

ನಶೀದ್ ರ ಗಾಯಗಳು ಮಾರಣಾಂತಿಕವಲ್ಲ ಎಂದು ಗೃಹ ಸಚಿವ ಇಮ್ರಾನ್ಅಬ್ದುಲ್ಲಾ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ದಾಳಿಯಲ್ಲಿ ನಶೀದ್ ರ ಓರ್ವಅಂಗರಕ್ಷಕನೂ ಗಾಯಗೊಂಡಿದ್ದಾರೆ. ಅಧ್ಯಕ್ಷ ಇಬ್ರಾಹೀಮ್ ಮುಹಮ್ಮದ್ ಸ್ವಾಲಿಹ್ ತನ್ನ ಮಿತ್ರ ನಶೀದ್ರನ್ನು ಆಸ್ಪತ್ರೆಯಲ್ಲಿ ಭೇಟಿಯಾದರು. ಬಳಿಕ ಸಚಿವ ಸಂಪುಟದ ತುರ್ತು ಸಭೆಯೊಂದನ್ನುಕರೆದಿದ್ದಾರೆ.

ಪ್ರಜಾಪ್ರಭುತ್ವದ ಮೇಲೆ ದಾಳಿ: ಅಧ್ಯಕ್ಷ ಸೊಲಿಹ್


ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಮೇಲೆ ನಡೆದಿರುವ ದಾಳಿಯು ಪ್ರಜಾಪ್ರಭುತ್ವ ಮತ್ತು ದೇಶದ ಪ್ರವಾಸೋದ್ಯಮ ಅವಲಂಬಿತ ಆರ್ಥಿಕತೆಯ ಮೇಲೆ ನಡೆದದಾಳಿಯಾಗಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹೀಂ ಮುಹಮ್ಮದ್ ಸೋಲಿಹ್ ಶುಕ್ರವಾರ ಬಣ್ಣಿಸಿದ್ದಾರೆ.

ತನಿಖೆಯಲ್ಲಿ ನೆರವು ನೀಡಲು ಆಸ್ಟ್ರೇಲಿಯದ ಫೆಡರಲ್ ಪೊಲೀಸ್ ತನಿಖಾಧಿಕಾರಿಗಳು ಶನಿವಾರ ಮಾಲೆಗೆ ಆಗಮಿಸಲಿದ್ದಾರೆ ಎಂದುಅವರು ಪ್ರಕಟಿಸಿದರು.

ದೇಶದ ಮೊದಲ ಪ್ರಜಾಸತ್ತಾತ್ಮಕ ಅಧ್ಯಕ್ಷ

ಮುಹಮ್ಮದ್ ನಶೀದ್ 2008ರಲ್ಲಿ ಮಾಲ್ದೀವ್ಸ್ ನ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದರು. ಈ ಮೂಲಕ ಅವರು ಮೌಮೂನ್ ಅಬ್ದುಲ್ ಖಯ್ಯೂಮ್‌ ರ 30 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದರು. ಆದರೆ, 2012ರಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಅವರನ್ನುಅಧಿಕಾರದಿಂದ ಕೆಳಗಿಳಿಸಲಾಯಿತು. 2013ರಲ್ಲಿ ನಡೆದ ವಿವಾದಾಸ್ಪದ ಚುನಾವಣೆಯಲ್ಲಿಅವರು ಖಯ್ಯೂಮ್‌ ರ ಮಲ ಸಹೋದರ ಅಬ್ದುಲ್ಲಾ ಯಮೀನ್ ವಿರುದ್ಧ ಪರಾಭವಗೊಂಡರು.

2015ರಲ್ಲಿ ಭಯೋತ್ಪಾದನೆ ಆರೋಪದಲ್ಲಿ ನಶೀದ್ಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ತೀರ್ಪುರಾಜಕೀಯ ಪ್ರೇರಿತವಾಗಿದೆ ಎಂಬ ವ್ಯಾಪಕಟೀಕೆಗೆ ಒಳಗಾಯಿತು. ಒಂದು ವರ್ಷದ ಬಳಿಕ, ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅವರಿಗೆ ಅನುಮತಿ ನೀಡಲಾಯಿತು. 2016ರಲ್ಲಿ ಬ್ರಿಟನ್ನಲ್ಲಿ ಅವರಿಗೆ ರಾಜಕೀಯ ಆಶ್ರಯ ಲಭಿಸಿತು. 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಮಿತ್ರ ಸ್ವಾಲಿಹ್ ಗೆದ್ದ ಬಳಿಕ ಅವರು ಮಾಲ್ದೀವ್ಸ್ ಗೆ ಮರಳಿದರು.

ಪರಿಸ್ಥಿತಿ ಗಂಭೀರ: ವೈದ್ಯರ ಹೇಳಿಕೆ

ಬಾಂಬ್ ಸ್ಫೋಟದಿಂದ ಗಾಯಗೊಂಡಿರುವ ಮಾಲ್ದೀವ್ಸ್ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಶುಕ್ರವಾರ ಹೇಳಿದ್ದಾರೆ.

ಗುರುವಾರ ರಾತ್ರಿ ನಡೆದ ದಾಳಿಯಲ್ಲಿ ಅವರ ತಲೆ, ಎದೆ, ಹೊಟ್ಟೆ ಮತ್ತು ಕೈಕಾಲುಗಳಿಗೆ ಗಾಯಗಳಾಗಿವೆ. 16 ಗಂಟೆಗಳ ಕಾಲ ಜೀವ ಉಳಿಸುವ ವೈದ್ಯಕೀಯಕಾರ್ಯಾಚರಣೆಯನ್ನು ನಡೆಸುತ್ತಾ ಬರಲಾಗಿದೆಎಂದುಅವರುಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆ ತಿಳಿಸಿದೆ.
ನಶೀದ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News