ಪಡುಬಿದ್ರಿ: ಟಾಸ್‍ಪೋರ್ಸ್ ಸಭೆ, ಮಾರ್ಗಸೂಚಿ ಪಾಲಿಸಲು ಕರೆ

Update: 2021-05-07 16:56 GMT

ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ ಕಾರ್ಯಪಡೆ ಸಭೆ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. 

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ, ರೋಗ ಲಕ್ಷಣವಿರುವ ಮಂದಿ ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಜನರಿಗೆ ಸೂಚಿಸಬೇಕು ಎಂದರು.

ಕೋವಿಡ್ ಎರಡನೇ ಅಲೆಯು ವೇಗವಾಗಿ ಹರಡುತಿದ್ದು, ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 117 ಕರೊನಾ ಪಾಸಿಟಿವ್ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ ಮಾಹಿತಿ ನೀಡಿದರು. 

ಆಂಬುಲೆನ್ಸ್ ಸೇವೆ: ಪಡುಬಿದ್ರಿಯ ಕಂಚಿನಡ್ಕ ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್‍ನಿಂದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕ ನೆಲೆಯಲ್ಲಿ ಆಂಬುಲೆನ್ಸ್ ಸೇವೆ ನೀಡಲು ಸಿದ್ಧವಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಫಿರೋಝ್ ಸಭೆಯಲ್ಲಿ ಘೋಷಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಫಿರೋಝ್ ನೇತೃತ್ವದ ತಂಡ ಕೋವಿಡ್ ಮಾರ್ಗಸೂಚಿಯಂತೆ ಶವ ಸಂಸ್ಕಾರ ಮಾಡಲು ಹಾಗೂ ಸಂದೇಶ್ ಶೆಟ್ಟಿ ನೇತೃತ್ವದಲ್ಲಿ ವ್ಯಾಕ್ಸಿನ್ ಪಡೆಯುವಂತೆ ಜನರಿಗೆ ಮನವರಿಕೆ ಮಾಡುವ ಅವಕಾಶ ನೀಡಲಾಯಿತು.

ಸುಮಾರು 550 ಮಂದಿ ಕೊವ್ಯಾಕ್ಸಿನ್ ಪ್ರಥಮ ಲಸಿಕೆ ಪಡೆದಿದ್ದು, ಲಸಿಕೆ ಸರಬರಾಜಿಲ್ಲದೆ ಎರಡನೇ ಲಸಿಕೆ ನೀಡಲಾಗಿಲ್ಲ. ಲಸಿಕೆಗಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಸರಬರಾಜದಲ್ಲಿ ಪ್ರಥಮ ಆದ್ಯತೆಯಲ್ಲಿ ಎರಡನೇ ಲಸಿಕೆ ಪಡೆಯುವವರಿಗೆ ನೀಡಲಾಗುವುದು ಎಂದರು.

ಜಿಲ್ಲಾಡಳಿತಕ್ಕೆ ಒತ್ತಾಯ: ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರುವವರನ್ನು ಮೊಹರು ಹಾಕಿ ಕಡ್ಡಾಯವಾಗಿ ಕ್ವಾರಂಟೈನ್‍ ಗೊಳಪಡಿ ಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಲು ಪಡುಬಿದ್ರಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆಯಿಂದ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ, ಪಡುಬಿದ್ರಿ ಠಾಣೆ ಎಎಸೈ ದಿವಾಕರ ಸುವರ್ಣ, ಪಿಡಿಒ ಪಂಚಾಕ್ಷರೀ ಸ್ವಾಮೀ ಕೆರಿಮಠ, ಕಾರ್ಯದರ್ಶಿ ರೂಪಲತಾ, ಗ್ರಾಮ ಕರಣಿಕ ಶ್ಯಾಮ್‍ಸುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News