ʼಸಂಸದರ ನಿಧಿಯಿಂದ ಖರೀದಿಸಿದ ಆಂಬುಲೆನ್ಸ್‌ ಗಳನ್ನು ಬಳಸುತ್ತಿಲ್ಲʼ: ಬಿಜೆಪಿ ಸಂಸದ ರಾಜೀವ್‌ ಪ್ರತಾಪ್‌ ವಿರುದ್ಧ ಆರೋಪ

Update: 2021-05-08 11:24 GMT

ಪಾಟ್ನಾ: ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರು ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆಸುವ ಸಮುದಾಯ ಕೇಂದ್ರವೊಂದರ ಹೊರಗಡೆ 30 ಬಳಕೆಯಲ್ಲಿಲ್ಲದ ಅಂಬ್ಯುಲೆನ್ಸ್‍ಗಳನ್ನು ನಿಲ್ಲಿಸಿರುವ ಕುರಿತಂತೆ  ಮಾಜಿ ಸಂಸದ ಪಪ್ಪು ಯಾದವ್ ಕಿಡಿ ಕಾರಿದ್ದಾರೆ.

ಈ ಅಂಬ್ಯುಲೆನ್ಸ್ ಗಳಲ್ಲಿ ರೂಡಿ ಅವರ ಹೆಸರಿನ ಸ್ಟಿಕ್ಕರ್‍ಗಳು ಇವೆಯಲ್ಲದೆ ಈ ಹಿಂದಿನ ಸಂಸದರ ಸ್ಥಳೀಯಾಡಳಿತ ಅಭಿವೃದ್ಧಿ ಯೋಜನೆಯ ನಿಧಿ ಬಳಸಿ ಖರೀದಿಸಲಾಗಿತ್ತು.

"ಇದು ಕ್ರಿಮಿನಲ್ ನಿರ್ಲಕ್ಷ್ಯ. ಆಸ್ಪತ್ರೆ ಒಂದು ಕಿಮೀ ದೂರವಿದ್ದರೂ ಜನರು ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಜನರು ರೂ 12,000ದಷ್ಟು ಹಣ ತೆರುತ್ತಿದ್ದಾರೆ. ಅಂಬ್ಯುಲೆನ್ಸ್ ಗಳ ತೀವ್ರ ಕೊರತೆಯಿದೆ ಹಾಗೂ ಸರಣ್ ಸಂಸದರು 100 ಅಂಬ್ಯುಲೆನ್ಸ್ ಗಳನ್ನು ಇರಿಸಿದ್ದಾರೆ. ಕೆಲ ಅಂಬ್ಯುಲೆನ್ಸ್ ಗಳನ್ನು  ಅವರು ತಮ್ಮದೇ ಜನರಿಗೆ ವಿತರಿಸಿದ್ದಾರೆ. ಈ ಕುರಿತು ತನಿಖೆ ನಡೆಯಬೇಕಿದೆ. ಎಂಪಿಲಾಡ್ ಫಂಡ್ ಸಾರ್ವಜನಿಕರ ಹಣವಾಗಿದೆ" ಎಂದು ಜನ್ ಅಧಿಕಾರ್ ಪಾರ್ಟಿಯ ಮುಖ್ಯಸ್ಥರೂ ಆಗಿರುವ ಪಪ್ಪು ಯಾದವ್ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ವೀಡಿಯೋದಲ್ಲಿ ಯಾದವ್ ಅವರು ನಿಲ್ಲಿಸಲಾಗಿರುವ ಅಂಬ್ಯುಲೆನ್ಸ್ ಗಳ ಸಮೀಪ ಹಾದು ಹೋಗಿ ಕೆಲವು ವಾಹನಗಳನ್ನು ಮುಚ್ಚಲು ಬಳಸಿದ್ದ ಟಾರ್ಪಾಲಿನ್‍ಗಳನ್ನು ಸರಿಸಿದಾಗ ಕೆಲವು ವಾಹನಗಳಲ್ಲಿ ಎಂಪಿಲಾಡ್-2019 ಬರೆದಿರುವುದು ಕಾಣಿಸುತ್ತದೆ.

ಯಾದವ್ ಅವರು ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಹಾಗೂ ಔಷಧಿ, ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.

ಆದರೆ ಯಾದವ್ ಅವರ  ಆರೋಗಳನ್ನು ರೂಡಿ ನಿರಾಕರಿಸಿದ್ದಾರಲ್ಲದೆ ಅಂಬ್ಯುಲೆನ್ಸ್ ಚಾಲಕರ ಕೊರತೆಯಿಂದ ವಾಹನಗಳು ಬಳಕೆಯಾಗಿಲ್ಲ ಎಂದಿದ್ದಾರೆ. ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆಚ್ಚು ಚಾಲಕರು ಮುಂದೆ ಬರುವುದಿಲ್ಲ ಎಂದು ಅವರು ಹೇಳಿದರಲ್ಲದೆ ತಮ್ಮ  ಕ್ಷೇತ್ರದಲ್ಲಿ 57 ಅಂಬ್ಯುಲೆನ್ಸ್ ಗಳು ಕಾರ್ಯನಿರತವಾಗಿದ್ದು ಯಾರಿಗೂ ಅಂಬ್ಯುಲೆನ್ಸ್ ದೊರೆಯದೇ ಇರುವ ಬಗ್ಗೆ ದೂರು ಇಲ್ಲ, ಪಪ್ಪು ಯಾದವ್ ಅವರಿಗೆ ರಾಜಕೀಯ ಮಾಡಬೇಕಿದ್ದರೆ ತಾವು ಸ್ಪರ್ಧಿಸುವ ಮಾಧೇಪುರದಲ್ಲಿ ಮಾಡಲಿ ಎಂದು ರೂಡಿ ಹೇಳಿದ್ದಾರೆ.

ರಾಜ್ಯದಲ್ಲಿ ಅಂಬ್ಯುಲೆನ್ಸ್ ಗಳ ಕೊರತೆಯಿಲ್ಲದೇ ಇದ್ದರೂ ಚಾಲಕರ ಕೊರತೆಯಂತೂ ಇದೆ, ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಹೆಚ್ಚು ಮಂದಿ ಸಿದ್ಧರಿಲ್ಲ ಎಂದು   ರಾಜ್ಯದ ಹಲವು ವೈದ್ಯರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News