×
Ad

ಮಂಗಳೂರು: ಲಾಕ್‌ಡೌನ್ ಪರಿಣಾಮಕಾರಿ ಜಾರಿಗೆ ನಾಗರಿಕರ ಸಲಹೆ ಬಯಸಿದ ಪೊಲೀಸ್ ಕಮಿಷನರ್

Update: 2021-05-08 21:41 IST

ಮಂಗಳೂರು, ಮೇ 8: ರಾಜ್ಯ ಸರಕಾರವು ಕೋವಿಡ್ 2ನೇ ಅಲೆಯನ್ನು ತಡೆಗಟ್ಟಲು ಘೋಷಿಸಿರುವ ಲಾಕ್‌ಡೌನ್‌ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಟ್ವೀಟ್ ಮೂಲಕ ನಾಗರಿಕರ ಸಲಹೆ ಬಯಸಿದ್ದಾರೆ. ಅಲ್ಲದೆ ಮೇ 9ರಂದು ಟ್ವೀಟರ್ ಹಾಗೂ ಫೇಸ್‌ಬುಕ್ ಲೈವ್ ಮೂಲಕ ಜನಾಭಿಪ್ರಾಯ ಆಲಿಸಲು ನಿರ್ಧರಿಸಿದ್ದಾರೆ.

ಈ ಕುರಿತು ಶನಿವಾರ ಮಧ್ಯಾಹ್ನ ಮಾಡಿದ ಟ್ವೀಟ್‌ಗೆ ಅಭಿಪ್ರಾಯಗಳ ಮಹಾಪೂರವೇ ಹರಿದುಬಂದಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ನಾಗರಿಕರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಕೋವ್ಯಾಕ್ಸಿನ್ ಬಂದಿಲ್ಲ, ಕೋವಿಶೀಲ್ಡ್ ಸರಿಯಾಗಿ ಸಿಗುತ್ತಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಹಾಗೂ ಟೋಕನ್‌ಗಾಗಿ ಲಸಿಕಾ ಕೇಂದ್ರಗಳಿಗೆ ಬರುವುದನ್ನು ತಡೆಯಬೇಕು. ಜನರಿದ್ದಲ್ಲಿಗೆ ತೆರಳಿ ಲಸಿಕೆ ನೀಡುವಂತಾಗಬೇಕು. ಲಸಿಕಾ ಕೇಂದ್ರಗಳೂ ಕೂಡ ಕೋವಿಡ್ ಹರಡಲು ಹಾಸ್ಪಾಟ್ ಆಗುತ್ತವೆ ಎಂಬ ಅಭಿಪ್ರಾಯವನ್ನು ನಾಗರಿಕರೊಬ್ಬರು ವ್ಯಕ್ತಪಡಿಸಿದ್ದಾರೆ.

ಮನೆ ಮನೆಗೆ ದಿನಸಿ ಸಾಮಗ್ರಿ ಮತ್ತು ತರಕಾರಿ ಡೆಲಿವರಿ ಮಾಡಬೇಕು. ಈ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿದ್ದರೆ ಉತ್ತಮ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹಾಲು ಮತ್ತು ತರಕಾರಿಗೆ ಖರೀದಿಗೆ ನಿತ್ಯವೂ ಅವಕಾಶ ಬೇಡ, ದಿನಬಿಟ್ಟು ದಿನ ಸಾಕು. ಮನೆ ಸಮೀಪದ ಅಂಗಡಿಯಿಂದಲೇ ಹಾಲು, ತರಕಾರಿ ಖರೀದಿಗೆ ಸೂಚನೆ ನೀಡಬೇಕು ಎಂದು ಇನ್ನೊಬ್ಬರು ಸಲಹೆ ಮಾಡಿದ್ದಾರೆ.

ಕೋವಿಡ್ ಸಂಪೂರ್ಣ ನಿಲ್ಲಬೇಕಾದರೆ ಮೊದಲಿಗೆ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಭಯ ದೂರವಾಗಬೇಕು. ಆಸ್ಪತ್ರೆಗಳ ಲೂಟಿ ನಿಂತಾಗ ಮಾತ್ರ ಕೊರೋನ ಕೂಡ ಸಾಯುತ್ತದೆ. ದೃಶ್ಯ ಮಾಧ್ಯಮಗಳು ಜನರಲ್ಲಿ ಮತ್ತಷ್ಟು ಭಯ ಹೆಚ್ಚಿಸುತ್ತವೆ ಎಂದು ನಾಗರಿಕರೊಬ್ಬರು ಆರೋಪಿಸಿದ್ದಾರೆ.

ಕೋವಿಡ್ ಸೋಂಕಿನ ಸರಪಳಿ ಕಡಿತಗೊಳ್ಳಬೇಕಾದರೆ ಜನರು ಮನೆಯಲ್ಲೇ ಇರಬೇಕು. ಅದಕ್ಕಾಗಿ ಸರಕಾರವೇ ಅವಶ್ಯಕ ಕುಟುಂಬಗಳಿಗೆ ಪ್ರತಿ 15 ದಿನಕ್ಕೆ ಬೇಕಾಗುವಷ್ಟು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು ಎಂದು ಮಹಿಳೆಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಹಂಪನಕಟ್ಟೆ, ಕ್ಲಾಕ್‌ಟವರ್, ಸೂಪರ್ ಮಾರ್ಕೆಟ್‌ಗಳಲ್ಲಿ ಜನಸಂದಣಿಗೆ ಅವಕಾಶ ನೀಡಬಾರದು. ವಾಹನಗಳಿಂದ ಉಗುಳುವವರು ಸೋಂಕನ್ನು ಪಸರಿಸುವವರು, ಮಾಸ್ಕ್ ಧರಿಸದವರಿಗೂ ದಂಡ ಮೊತ್ತ 1 ಸಾವಿರಕ್ಕೆ ಏರಿಸಬೇಕು. ಬೆಳಗ್ಗೆ 10 ಗಂಟೆಯೊಳಗೆ ಯಾರನ್ನೂ ತಡೆಯಬೇಡಿ, ನಂತರ ಯಾರನ್ನೂ ಬಿಡಬೇಡಿ ಎಂದು ಒಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News