25ನೇ ಬಾರಿ ಎವರೆಸ್ಟ್ ಏರಿ ದಾಖಲೆ ನಿರ್ಮಿಸಿದ ನೇಪಾಳಿ ಪರ್ವತಾರೋಹಿ

Update: 2021-05-08 16:12 GMT
photo: twitter

ಕಠ್ಮಂಡು (ನೇಪಾಳ), ಮೇ 8: ನೇಪಾಳದ ಪರ್ವತಾರೋಹಿ ಕಮಿ ರಿಟ ಶೆರ್ಪಾ ಶುಕ್ರವಾರ 25ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿದ್ದಾರೆ. ಇದರೊಂದಿಗೆ ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನು ಅತಿ ಹೆಚ್ಚು ಬಾರಿ ಏರಿದ ತನ್ನದೇ ದಾಖಲೆಯನ್ನು ಅವರು ಮುರಿದಿದ್ದಾರೆ.

ಶೆರ್ಪಾ ಶಿಖರಕ್ಕೆ ಏರುವ ಹಗ್ಗಗಳನ್ನು ಸರಿಪಡಿಸುವ 12 ಸದಸ್ಯರ ತಂಡದ ಸದಸ್ಯರಾಗಿದ್ದಾರೆ. ಪ್ರಸಕ್ತ ಆರೋಹಣ ಋತುವಿನ ಮೊದಲ ಆರೋಹಿಗಳು ಈ ತಂಡದ ಸದಸ್ಯರಾಗಿದ್ದಾರೆ. ಮುಂದಿನ ವಾರಗಳಲ್ಲಿ ನೂರಾರು ಆರೋಹಿಗಳು ಎವರೆಸ್ಟ್ ಏರುವ ನಿರೀಕ್ಷೆಯಿದೆ.

‘‘ಕಮಿ ರಿಟ ತನ್ನ 25ನೇ ಆರೋಹಣದ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ’’ ಎಂದು ‘ಸೆವೆನ್ ಸಮಿಟ್ ಟ್ರೆಕ್ಸ್’ ಮಿಂಗ್ಮ ಶೆರ್ಪಾ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದರು.

ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಪರ್ವತಾರೋಹಿ ಗೈಡ್ ಆಗಿರುವ ಕಮಿ ರಿಟ, 1994ರಲ್ಲಿ ಮೊದಲ ಬಾರಿಗೆ 8,848 ಮೀಟರ್ ಎತ್ತರದ ಶಿಖರವನ್ನು ಏರಿದ್ದರು. ಅಂದಿನಿಂದ ಅವರು ಬಹುತೇಕ ಪ್ರತಿ ವರ್ಷ ಈ ಶಿಖರವನ್ನು ಏರುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News