ಕೋವಿಡ್ ಲಸಿಕೆ ವಿತರಣೆ ವಿಚಾರದಲ್ಲಿ ರಾಜಕೀಯ : ವೆರೋನಿಕಾ ಕರ್ನೆಲಿಯೋ

Update: 2021-05-08 16:13 GMT

ಉಡುಪಿ, ಮೇ 8: ಜಿಲ್ಲೆಯಲ್ಲಿ ಬಂದಿರುವ ಕೋವಿಡ್ ಲಸಿಕೆ ವಿತರಿಸುವಲ್ಲಿ ರಾಜಕೀಯ ಬೆರೆಸುತ್ತಿರುವ ವಿಚಾರ ಗಮನಕ್ಕೆ ಬರುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಿ ಎಲ್ಲರಿಗೂ ಸೂಕ್ತ ಸಮಯದಲ್ಲಿ ಲಸಿಕೆ ಲಭಿಸುವಂತೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ಯಾನಲಿಸ್ಟ್ ವೇರೊನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಮೊದಲ ಡೋಸ್ ಪಡೆದವರಿಗೆ ಇನ್ನೂ ಕೂಡ ಎರಡನೇ ಡೋಸ್ ಲಸಿಕೆ ನೀಡಿಲ್ಲ. ಕಳೆದ ಹಲವು ದಿನಗಳಿಂದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಸಂಪೂರ್ಣವಾಗಿ ನಿಂತು ಹೋಗಿದ್ದು ದೂರದ ಗ್ರಾಮಾಂತರ ಪ್ರದೇಶದ ಹಿರಿಯ ಜೀವಗಳು ಜಿಲ್ಲಾಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲೂ ಕೂಡ ಕಳೆದ ನಾಲ್ಕೈದು ದಿನಗಳಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಪೊರೈಕೆಯಾಗದೆ ಇರುವುದು ವಿಷಾದನೀಯ ಎಂದರು.

ಗ್ರಾಮಾಂತರ ಪ್ರದೇಶದಿಂದ ಹಿರಿಯ ನಾಗರಿಕರು ಬಾಡಿಗೆ ವಾಹನ ಮಾಡಿಕೊಂಡು ಬಂದು ಲಸಿಕೆಗಾಗಿ ಟೋಕನ್ ಪಡೆದು ಕಾದು ಕೂರುವ ಪರಿಸ್ಥಿತಿ ಉಂಟಾಗಿದೆ. ಮೊದಲು ಬಂದು ಟೋಕನ್ ಪಡೆದರೂ ಕೂಡ ಕೆಲವು ರಾಜಕೀಯ ಪಕ್ಷದ ನಾಯಕರು ಲಸಿಕಾ ಕೇಂದ್ರದಲ್ಲಿ ಕುಳಿತು ಅವರಿಗೆ ಬೇಕಾದ ವ್ಯಕ್ತಿಗಳು ತಡವಾಗಿ ಬಂದರೂ ಅವರಿಗೆ ಲಸಿಕೆಯನ್ನು ಹಾಕಿಸಿ ಕಳುಹಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಅವರು ದೂರಿದ್ದಾರೆ.

ಈ ನಡುವೆ ಬೆಳಿಗ್ಗೆಯಿಂದ ಊಟ ತಿಂಡಿ ಎಲ್ಲವನ್ನೂ ಬಿಟ್ಟು ಟೋಕನ್ ಪಡೆದು ಕಾದು ಕುಳಿತವರಿಗೆ ಮಧ್ಯಾಹ್ನವಾಗುವ ಲಸಿಕೆ ಖಾಲಿಯಾಗಿದೆ ಎಂದು ತಿಳಿಸಿ ವಾಪಾಸು ಕಳಹಿಸಿದ್ದಾರೆ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡದೆ ಜಿಲ್ಲಾಸ್ಪತ್ರೆ ಯಲ್ಲಿ ಕೂಡ ಮೊದಲು ಬಂದವರಿಗೆ ಲಸಿಕೆ ನೀಡದೆ ರಾಜಕೀಯ ಮಾಡಿರುವುದು ಖಂಡನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News