ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ ಬೆಡ್ ಕೊಡಲ್ಲ: ಎಚ್ಚರಿಕೆ ನೀಡಿದ ಉಡುಪಿ ಜಿಲ್ಲಾಧಿಕಾರಿ

Update: 2021-05-08 17:47 GMT

ಉಡುಪಿ, ಮೇ 8: ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದು ದಾಖಲಾಗುವವರಿಗೆ ಜಿಲ್ಲಾಡಳಿತ ವೆಂಟಿಲೇಟರ್ ನೀಡಲು ಆಗುವುದಿಲ್ಲ. ಅವರು ಜೀವದ ಜೊತೆ ಅವರೇ ಆಟ ಆಡುತ್ತಿದ್ದಾರೆ. ಆ ರೀತಿ ಬಂದರೆ ನಮ್ಮಲ್ಲಿ ಎಷ್ಟು ಬೆಡ್‌ಗಳಿದ್ದರೂ ಸಾಕಾಗುವುದಿಲ್ಲ. ಸಾರ್ವಜನಿಕರ ನಿರ್ಲಕ್ಷಕ್ಕೆ ನಾವು ಸಿದ್ಧತೆ ಮಾಡಲು ಆಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಪಂ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿಗೆ ಆಸ್ಪತ್ರೆಯ ಅಗತ್ಯ ಇರುವುದಿಲ್ಲ. ಕೇವಲ ಶೇ.10 ಮಂದಿಗೆ ಮಾತ್ರ ಅಗತ್ಯ ಇರುತ್ತದೆ. ಅಂತಹ ಶೇ.10 ಮಂದಿಗೆ ಜಿಲ್ಲಾಡಳಿತ ಬೆಡ್ ಕೊಡಲು ಸಿದ್ಧ ಇದೆ. ಅದರಲ್ಲಿ ಶೇ.1 ಮಂದಿಗೆ ಐಸಿಯು ಮತ್ತು ಶೇ.2ರಷ್ಟು ಮಂದಿಗೆ ಆಕ್ಸಿಜನ್ ಅಗತ್ಯ ಇರುತ್ತದೆ ಎಂದರು.

ಜಿಲ್ಲೆಯಲ್ಲಿ 1300ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್‌ಗಳು ಈಗ ಲಭ್ಯ ಇವೆ. ಅದರಲ್ಲಿ 350 ಬೆಡ್‌ಗಳು ಭರ್ತಿ ಆಗಿವೆ. ಸಾರ್ವಜನಿಕರು ಆಸ್ಪತ್ರೆಗೆ ಬಾರದೆ ಹೋಮ್ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖ ಆಗಲು ಸಾಧ್ಯ ಇದೆ. ಆದರೆ ಹೆದರಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬೆಡ್‌ಗಳಿಗೆ ಯಾವುದೇ ಕೊರತೆ ಇಲ್ಲ. ಜನ ಬೆಡ್ ಇಲ್ಲ ಎಂದು ಹೆದರುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆರು ಮೆಟ್ರಿಕ್ ಟನ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದ್ದು, ಅದರಲ್ಲಿ ಇಂದು 4 ಮೆಟ್ರಿಕ್ ಟನ್ ಆಕ್ಸಿಜನ್ ತುಂಬಿಸಲಾಗಿದೆ. ಅದೇ ರೀತಿ ಬೆಳಪುವಿನ ಘಟಕದಲ್ಲಿ ಪ್ರಸ್ತುತ 7 ಮೆಟ್ರಿಕ್ ಟನ್ ಇದ್ದು, ನಾಳೆ 10 ಮೆಟಿಕ್ ಟನ್ ಬರಲಿದೆ. ಬೆಹರೈನ್‌ನಿಂದ ಬಂದ ಆರು ಮೆಟ್ರಿಕ್ ಟನ್ ಆಕ್ಸಿಜನ್‌ನ್ನು ಈಗಾಗಲೇ ಬೆಳಪುವಿನಲ್ಲಿ ತುಂಬಿಸಿ ಇಡಲಾಗಿದೆ. ಹೀಗೆ ಈಗ ಜಿಲ್ಲೆಗೆ ಆಕ್ಸಿಜನ್ ನಿರಂತರವಾಗಿ ಪೂರೈಕೆ ಆಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಹೋಮ್ ಐಸೋಲೇಷನ್ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳ ಲಾಗಿದೆ. ಗ್ರಾಪಂನವರು ಮನೆಮನೆಗಳಿಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಲಿದ್ದಾರೆ. ಅಗತ್ಯ ಇರುವವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕೋವಿಡ್ ಸೆಂಟರ್‌ಗಳು ಆರಂಭ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಮಣಿಪಾಲ ಎಂಐಟಿಯಲ್ಲಿ 300, ಕುಂದಾಪುರ ದೇವರಾಜ ವಸತಿ ನಿಲಯ ದಲ್ಲಿ 75, ಕಾರ್ಕಳ ಮಿಯ್ಯರಿನ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ 60 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುಂದೆ ಇವು ಭರ್ತಿಯಾದರೆ ಬೆಡ್ ಸಂಖ್ಯೆ ಹೆಚ್ಚಿಸ ಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ತಮ್ಮ ಮನೆಗಳಲ್ಲಿ ಐಸೋಲೇಷನ್‌ಗೆ ಸರಿಯಾದ ವ್ಯವಸ್ಥೆ ಇಲ್ಲದವರು ಈ ಕೋವಿಡ್ ಸೆಂಟರ್‌ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಇಲ್ಲಿ ವೈದ್ಯರುಗಳು ಕೂಡ ಇರುತ್ತಾರೆ. ಅದಕ್ಕೆ ಕಾಲ್‌ಸೆಂಟರ್ ಮೂಲಕ ಬಂದು ಇಲ್ಲಿ ದಾಖ ಲಾಗಬಹುದು. ಇಲ್ಲಿ ಸುರಕ್ಷಿತವಾಗಿರಬಹುದು. ಅದೇ ರೀತಿ ಕೋವಿಡ್ ಕಾಲ್‌ಸೆಂಟರ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಆಯ್ಯುಷ್ಮಾನ್ ಭಾರತ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News