ಸೋಮವಾರದ ಕಠಿಣ ಲಾಕ್‌ಡೌನ್ ಭೀತಿ: ಉಡುಪಿಯಲ್ಲಿ ಹೆಚ್ಚಿದ ಜನದಟ್ಟಣೆ

Update: 2021-05-08 16:26 GMT

ಉಡುಪಿ, ಮೇ 8: ಸರಕಾರದ ಹೊಸ ಮಾರ್ಗಸೂಚಿಯಂತೆ ಸೋಮವಾರ ದಿಂದ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಇಂದು ಉಡುಪಿ ನಗರದಲ್ಲಿ ಹೆಚ್ಚು ಜನ ಸಂಚಾರ ಕಂಡುಬಂದಿದ್ದು, ಜನರು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿದ ಹಿನ್ನೆಲೆಯಲ್ಲಿ ಕೃತಕ ಅಭಾವ ಸೃಷ್ಠಿಯಾಗಿದೆ.

ಬೆಳಗ್ಗೆಯಿಂದಲೇ ನಗರದಲ್ಲಿ ವಾಹನ ಸಂಚಾರ ಸಾಕಷ್ಟು ಕಂಡುಬಂದಿದೆ. ಸೋಮವಾರದಿಂದ ವಾಹನ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಜನ ಇಂದೇ ತಮಗೆ ಬೇಕಾದ ವಸ್ತುಗಳ ಖರೀದಿಗೆ ಉಡುಪಿಗೆ ಆಗಮಿಸಿದ್ದರು. ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಕಂಡುಬಂತು. ಅದೇ ರೀತಿ ವೈನ್‌ಶಾಪ್‌ಗಳಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು.
ಮಾಮೂಲಿ ದಿನಗಳಿಗಿಂತ ಇಂದು ಹೆಚ್ಚಿನ ಜನ ತರಕಾರಿ ಖರೀದಿಸಲು ಬಂದಿದ್ದರು. ಆದರೆ ನಮ್ಮಲ್ಲಿ ಸಾಮಾನ್ಯ ದಿನಗಳಷ್ಟೆ ತರಕಾರಿ ಗಳಿದ್ದವು. ಹಾಗಾಗಿ ತರಕಾರಿಗಳು ಬಹುಬೇಗನೆ ಖಾಲಿಯಾಗಿ ಕೃತಕ ಅಭಾವ ಸೃಷ್ಟಿಯಾಯಿತು ಎಂದು ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.

ಎಪ್ರಿಲ್ ಮೇ ತಿಂಗಳು ಮದುವೆ ಸೀಜನ್ ಆಗಿರುವುದರಿಂದ ಉಳಿದ ಸಮಯಗಳಲ್ಲಿ ತರಕಾರಿ ಬೆಲೆ ಗನಗಕ್ಕೇರುತ್ತದೆ. ಆದರೆ ಇಂದು ಯಾವುದೇ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ತರಕಾರಿ ಬೆಲೆ ಸಾಕಷ್ಟು ಇಳಿಕೆ ಕಂಡಿವೆ. 30-40ರೂ. ಇದ್ದ ಟೊಮೊಟೆ ಬೆಲೆ 15-20ರೂ.ಗೆ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕುಂದಾಪುರದಲ್ಲಿ ಬೆಳಿಗ್ಗೆ ನಡೆದ ವಾರದ ಸಂತೆಯಲ್ಲಿ ಜನ ಸಾಗರ, ಮೆಡಿಕಲ್ ನಲ್ಲಿ ಕ್ಯೂ, ಅಂಗಡಿಯಲ್ಲಿ ನೂಕು ನುಗ್ಗಲು, ಎಣ್ಣೆ ಅಂಗಡಿಯಲ್ಲಿ ಜನದಟ್ಟನೆ ಕಂಡುಬಂದವು. ಅಲ್ಲದೆ ತೆರೆದಿಟ್ಟ ಎಲ್ಲಾ ಅಂಗಡಿಗಳು ಪೇಟೆ ಸುತ್ತ ಮುತ್ತ ದಟ್ಟನೆ ವಾಹನಗಳ ಓಡಾಟ ಕಂಡುಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News