ಕಾಬೂಲ್‌: ಶಾಲೆಯನ್ನು ಗುರಿಯಾಗಿಸಿಕೊಂಡು ಸ್ಫೋಟ; 50ಕ್ಕೂ ಹೆಚ್ಚು ಮಂದಿ ದುರ್ಮರಣ, 100 ಮಂದಿಗೆ ಗಾಯ

Update: 2021-05-09 18:37 GMT
photo: twitter (@atifthepoet)

ಕಾಬೂಲ್, ಮೇ 9: ಅಪಘಾನಿಸ್ತಾನದ ರಾಜಧಾನಿ ಕಾಬೂಲ್ನ ಬಳಿಯಿರುವ ಹೆಣ್ಣುಮಕ್ಕಳ ಶಾಲೆಯ ಹೊರಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್ ಬಳಿಯ ಸಯೀದುಲ್ ಶುಹಾದ ಹೈಸ್ಕೂಲ್ನ ಹೊರಭಾಗದಲ್ಲಿ ಶನಿವಾರ ಮಧ್ಯಾಹ್ನ ಕಾರು ಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ ಶಾಲೆಯ ಬಳಿ ಎರಡು ರ್ಯಾಕೆಟ್ಗಳು ಬಂದು ಅಪ್ಪಳಿಸಿವೆ. ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಅಪಘಾನಿಸ್ತಾನದ ಒಳಾಡಳಿತ ಇಲಾಖೆಯ ಸಚಿವರ ವಕ್ತಾರರನ್ನು ಉಲ್ಲೇಖಿಸಿ ‘ಟೋಲೋ ನ್ಯೂಸ್’ ವರದಿ ಮಾಡಿದೆ. 

55 ಮಂದಿ ಮೃತಪಟ್ಟಿರುವುದಾಗಿ ರಾಯ್ಟರ್ಸ್ ಹೇಳಿದರೆ, ಮರಣ ಹೊಂದಿದವರ ಸಂಖ್ಯೆ 58 ಎಂದು ಅಲ್ಜಝೀರ ವರದಿ ಮಾಡಿದೆ. ಶಾಲೆಯ ಪ್ರವೇಶದ್ವಾರದ ಬಳಿ ಕಾರು ಬಾಂಬ್ ಸ್ಫೋಟಿಸಿದ್ದು ಮೃತಪಟ್ಟವರಲ್ಲಿ 8 ವಿದ್ಯಾರ್ಥಿನಿಯರೂ ಸೇರಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಾಂಬ್ ಸ್ಫೋಟದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. 

ದಾಳಿಯನ್ನು ಖಂಡಿಸಿರುವ ಅಪಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಇದರ ಹಿಂದೆ ತಾಲಿಬಾನ್ ಸಂಘಟನೆಯ ಕೈವಾಡವಿದೆ. ತಾಲಿಬಾನಿಗಳು ತಾವು ನಡೆಸುತ್ತಿರುವ ಅಕ್ರಮ ಯುದ್ಧ ಮತ್ತು ಹಿಂಸಾಚಾರ ಕೃತ್ಯವನ್ನು ಹೆಚ್ಚಿಸಿರುವ ಜೊತೆಗೆ, ಈಗ ಅಪಘಾನಿಸ್ತಾನದಲ್ಲಿರುವ ಸ್ಥಿತಿಯನ್ನು ಸೌಹಾರ್ದಯುತ ಮತ್ತು ಶಾಂತರೀತಿಯಲ್ಲಿ ಬಗೆಹರಿಸುವಲ್ಲಿ ಅವರಿಗೆ ಆಸಕ್ತಿಯಿಲ್ಲ ಎಂದು ಮತ್ತೊಮ್ಮೆ ಜಾಹೀರುಗೊಳಿಸಿದ್ದಾರೆ ಎಂದು ಘನಿ ಹೇಳಿದ್ದಾರೆ. ಆದರೆ ಇದು ತಮ್ಮ ಕೃತ್ಯವಲ್ಲ ಎಂದು ತಾಲಿಬಾನ್ ಸಂಘಟನೆ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News