ಶಾಸಕ ಕಾಮತ್‌ಗೆ 11 ಪ್ರಶ್ನೆಗಳನ್ನು ಮುಂದಿಟ್ಟ ಮಾಜಿ ಶಾಸಕ ಐವನ್ ಡಿಸೋಜ

Update: 2021-05-08 17:33 GMT
ಐವನ್ ಡಿಸೋಜ- ವೇದವ್ಯಾಸ ಕಾಮತ್

ಮಂಗಳೂರು, ಮೇ 8: ಆರೋಗ್ಯದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಮಾಡಿರುವ ಆರೋಪಕ್ಕೆ ಮಾಜಿ ಶಾಸಕ ಐವನ್ ಡಿಸೋಜ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರೋಗ್ಯ ಕ್ಷೇತ್ರದ ಬೆಳವಣಿಗೆಗೆ ಕಾಂಗ್ರೆಸ್ ವಹಿಸಿದ ಪಾತ್ರದ ಬಗ್ಗೆ ಚರಿತ್ರೆಯಿಂದ ತಿಳಿದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಆರೋಗ್ಯದ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲಸಲ್ಲದ್ದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಶಾಸಕರ ಹೇಳಿಕೆಯು ಅವರ ವೈಫಲ್ಯವನ್ನು ಮುಚ್ಚಿಡುವ ತಂತ್ರವಾಗಿದೆ. ಅಲ್ಲದೆ ಶಾಸಕ ವೇದವ್ಯಾಸ ಕಾಮತ್‌ರಿಗೆ ಐವನ್ ಡಿಸೋಜ 11 ಪ್ರಶ್ನೆಗಳನ್ನು ಕೇಳಿದ್ದು, ಉತ್ತರ ಬಯಸಿದ್ದಾರೆ.

*ಮಂಗಳೂರು ಆಸ್ಪತ್ರೆಗಳಲ್ಲಿರುವ ಲಭ್ಯ ವೆಂಟಿಲೇಟರುಗಳು ಎಷ್ಟು?
*ಕೋವಿಡ್ 2ನೇ ಅಲೆಯ ಹರಡುವಿಕೆ ತಡೆಯಲು ಎಷ್ಟು ಹೊಸ ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ ಮತ್ತು ಎಷ್ಟು ಆಕ್ಸಿಜನ್ ಬೆಡ್‌ಗಳು ತಯಾರು ಮಾಡಲಾಗಿದೆ?
*ಲಸಿಕೆಯ ಕೊರತೆಗೆ ಕಾರಣ ಏನು?
*ವ್ಯಾಕ್ಸಿನ್ ಮೊದಲ ಡೋಸ್ ತೆಗೆದುಕೊಂಡ ಮೇಲೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ತೆಗೆದುಕೊಂಡು 2ನೇ ಡೋಸಿನ ತೆಗೆದುಕೊಳ್ಳುವ ಅವಧಿ ಮೀರಿದರೂ ಫಲಾನುಭವಿಗಳಿಗೆ ವಿತರಿಸಲು ವಿಳಂಬ ಯಾಕೆ?
*ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆಗೆ ಏನು ಕ್ರಮ ಕೈಗೊಂಡಿರುವಿರಿ? ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಸರಬರಾಜಿಗೆ ವ್ಯವಸ್ಥೆ ಮಾಡಿರುವಿರಾ?
*ಬೆಡ್ ಅಲಭ್ಯದಿಂದ ಸರಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಕೋವಿಡ್ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅವರ ಬಿಲ್ಲನ್ನು ಕಟ್ಟುವವರು ಯಾರು?
*ಆಕ್ಸಿಜನ್ ಕೊರತೆಯಿದ ರೋಗಿಗಳು ಕಷ್ಟ ಪಡುತ್ತಿದ್ದಾರೆ. ಆದರೆ ಯಾವುದೇ ಸಮಸ್ಯೆಯಿಲ್ಲ ಎಂಬ ನಿಮ್ಮ ಹೇಳಿಕೆ ಎಷ್ಟು ಸರಿ?
*ಹೆಚ್ಚುವರಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಬೆಡ್‌ಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆಯಿಂದ ಎಷ್ಟು ಹಣವನ್ನು ಬಿಡುಗಡೆ ಮಾಡಿಸಿದ್ದೀರಿ?
*ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್‌ಗಾಗಿ ನೀಡಿದ ಸಹಾಯಧನ ಮಂಗಳೂರಿಗೆ ಎಷ್ಟು ಬಂದಿದೆ?
*ಜಿಲ್ಲೆಯಲ್ಲಿ ಎಲ್ಲವೂ ಸರಿಯಿದೆ, ಯಾವುದಕ್ಕೂ ಕೊರತೆಯಿಲ್ಲ ಎಂದಾದರೆ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು ಹೆಚ್ಚಾಗಲು ಕಾರಣ ಏನು?
*ಕೊರೋನ ನಿಗ್ರಹಕ್ಕೆ ಲಾಕ್‌ಡೌನ್ ಪರಿಹಾರ ಎಂಬ ನಿಮ್ಮ ಹೇಳಿಕೆ ಎಷ್ಟು ಸರಿ?
ಇಂತಹ ಪ್ರಶ್ನೆಗಳನ್ನು ಕೇಳಿದರೆ ಕಾಂಗ್ರೆಸ್ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಹೇಳುವ ಧೈರ್ಯ ನಿಮಗಿದೇಯೇ? ಜನರ ಪರವಾಗಿ ಬೇಡಿಕೆ ಸಲ್ಲಿಸುವುದು ವಿಪಕ್ಷವಾದ ಕಾಂಗ್ರೆಸ್‌ನ ಕರ್ತವ್ಯವಾಗಿದೆ. ಆರೋಗ್ಯ ಕ್ಷೇತ್ರಕ್ಕಾಗಿ ತಾವು ನಗರಕ್ಕೆ ತಂದ ಅನುದಾನ ಮತ್ತು ಅಭಿವೃದ್ಧಿಗಳ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಐವನ್ ಡಿಸೋಜ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News