ಲಂಡನ್ ಮೇಯರ್ ಆಗಿ ಸಾದಿಕ್ ಖಾನ್ ಮರು ಆಯ್ಕೆ

Update: 2021-05-09 18:27 GMT

ಲಂಡನ್, ಮೇ 9: ಲಂಡನ್ ಮೇಯರ್ ಸಾದಿಕ್ ಖಾನ್ ಶನಿವಾರ ಎರಡನೇ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. 50 ವರ್ಷದ ಮಾನವಹಕ್ಕುಗಳ ವಕೀಲ ಹಾಗೂ ಬ್ರಿಟನ್ನ ಪ್ರಧಾನ ಪ್ರತಿಪಕ್ಷ ಲೇಬರ್ ಪಾರ್ಟಿಯ ನಾಯಕ ತನ್ನ ಎದುರಾಳಿ ಕನ್ಸರ್ವೇಟಿವ್ ಪಕ್ಷದ ಶಾನ್ ಬೇಲಿಯನ್ನು ಸೋಲಿಸಿದ್ದಾರೆ.

ಪಾಕಿಸ್ತಾನದಿಂದ ವಲಸೆ ಬಂದಿರುವ ಬಸ್ ಚಾಲಕನ ಪುತ್ರನಾಗಿರುವ ಸಾದಿಕ್ ಖಾನ್ 2016ರಲ್ಲಿ ಮೊದಲ ಬಾರಿಗೆ ಲಂಡನ್ ಮೇಯರ್ ಆಗಿ ಆಯ್ಕೆಯಾದರು. ಪಾಶ್ಚಾತ್ಯ ದೇಶವೊಂದರ ರಾಜಧಾನಿಯ ಮೇಯರ್ ಆದ ಮೊದಲ ಮುಸ್ಲಿಮ್ ಅವರಾದರು.
ಲಂಡನ್ನ ಸರಕಾರಿ ಗೃಹ ಮಂಡಳಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅವರು ಲಂಡನ್ ಮೇಯರ್ ಹಂತಕ್ಕೆ ಬೆಳೆದ ಕತೆ ಜಗತ್ತಿನ ಗಮನ ಸೆಳೆದಿದೆ.

ಅವರು ಬ್ರೆಕ್ಸಿಟ್ ಮತ್ತು ಕನ್ಸರ್ವೇಟಿವ್ ಪಕ್ಷದ ಪ್ರಧಾನಿಗಳ ಟೀಕಾಕಾರರಾಗಿದ್ದರು. ಸಾದಿಕ್ ಖಾನ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವೈರತ್ವ ಜಗತ್ಪ್ರಸಿದ್ಧವಾಗಿತ್ತು.

ಟ್ರಂಪ್ ವಿರುದ್ಧದ ಪ್ರಸಿದ್ಧ ಜಂಗಿ ಕುಸ್ತಿಯಲ್ಲಿ ಗೆದ್ದ ಸಾದಿಕ್!

ಕೆಲವು ಮುಸ್ಲಿಮ್ ದೇಶಗಳ ಪ್ರವಾಸಿಗರು ಅಮೆರಿಕಕ್ಕೆ ಬರುವುದನ್ನು ನಿಷೇಧಿಸಿರುವುದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಸಾದಿಕ್ ಖಾನ್ ಟೀಕಿಸಿದ್ದರು. ಇದು ಮುಂದೆ ಅವರ ನಡುವಿನ ಅಸಾಧಾರಣ ಮಾತಿನ ಚಕಮಕಿಗೆ ಕಾರಣವಾಯಿತು.

ಇದಕ್ಕೆ ತಿರುಗೇಟು ನೀಡಿದ ಟ್ರಂಪ್, ಸಾದಿಕ್ ಖಾನ್ ಭಯೋತ್ಪಾದನೆಯ ವಿಷಯದಲ್ಲಿ ಕೆಟ್ಟ ನಿರ್ವಹಣೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅದೂ ಅಲ್ಲದೆ, ಸಾದಿಕ್ ಖಾನ್ ಸಂಪೂರ್ಣ ಸೋತ ವ್ಯಕ್ತಿ (ಸ್ಟೋನ್ ಕೋಲ್ಡ್ ಲೂಸರ್) ಹಾಗೂ ರಾಷ್ಟ್ರೀಯ ಅವಮಾನ ಎಂಬುದಾಗಿ ಬಣ್ಣಿಸಿದ್ದರು.

ಟ್ರಂಪ್ 2018ರಲ್ಲಿ ಬ್ರಿಟನ್ಗೆ ಭೇಟಿ ನೀಡುವುದನ್ನು ವಿರೋಧಿಸಿ ಸಂಸತ್ ಚೌಕದಲ್ಲಿ ಪ್ರತಿಭಟನೆ ನಡೆದಿತ್ತು. ಆಗ ಮಗುವಿನಂತೆ ಬಟ್ಟೆ ಹಾಕಿದ ಟ್ರಂಪ್ ಆಕೃತಿಯ ಬಲೂನನ್ನು ಪ್ರತಿಭಟನಾ ಸ್ಥಳದಲ್ಲಿ ಹಾರಿಸಲು ಸಾದಿಕ್ ಖಾನ್ ಅವಕಾಶ ನೀಡಿದ್ದರು.
ಅವರು ನನ್ನನ್ನು ಒಮ್ಮೆ ಸಂಪೂರ್ಣ ಸೋತ ವ್ಯಕ್ತಿ ಎಂಬುದಾಗಿ ಕರೆದಿದ್ದಾರೆ. ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಮಾತ್ರ ಸೋಲಲು ಸಾಧ್ಯ. ಆದರೆ ಅದು ನಾನಲ್ಲ ಎಂದು ಗುರುವಾರದ ಮೇಯರ್ ಚುನಾವಣೆಗೆ ಮುನ್ನ ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾದಿಕ್ ಖಾನ್ ಹೇಳಿದ್ದರು.

ಈಗ ಸಾದಿಕ್ ಖಾನ್ ಗೆದ್ದಿದ್ದಾರೆ, ಟ್ರಂಪ್ ಕಳೆದ ವರ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News