×
Ad

ವೈದ್ಯನ ಸೋಗಿನಲ್ಲಿ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣು ಮಾರಾಟಗಾರನ ಬಂಧನ

Update: 2021-05-09 12:15 IST

ಮುಂಬೈ: ವೈದ್ಯನ ಸೋಗಿನಲ್ಲಿ ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಹಣ್ಣು ಮಾರಾಟಗಾರನೊಬ್ಬನನ್ನು ಬಂಧಿಸಲಾಗಿದೆ.

ನಾಗ್ಪುರದ ಕಾಮಥಿ ಪ್ರದೇಶ ಮೂಲದ ಚಂದನ್ ನರೇಶ್ ಚೌಧರಿ ಹಣ್ಣುಗಳು ಹಾಗೂ  ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದ. ನಂತರ ಆತ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚೌಧರಿ ಕಳೆದ ಐದು ವರ್ಷಗಳಿಂದ ಓಂ ನಾರಾಯಣ ವಿವಿಧೋದ್ದೇಶ ಸೊಸೈಟಿ ಎಂಬ ಚಾರಿಟೇಬಲ್ ಔಷಧಾಲಯವನ್ನು ನಡೆಸುತ್ತಿದ್ದ, ಅಲ್ಲಿ ಆತ ರೋಗಿಗಳಿಗೆ ಆಯುರ್ವೇದ ಪ್ರಕೃತಿ ಚಿಕಿತ್ಸೆಯನ್ನು ನೀಡುತ್ತಿದ್ದ.

ದೇಶದಲ್ಲಿ ಈಗ  ಜನರನ್ನು ಕಾಡುತ್ತಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದ  ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡ ಈ ನಕಲಿ ವೈದ್ಯ  ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ತನ್ನ ಔಷಧಾಲಯದಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದ.

ಚೌಧರಿಗೆ ಪರಿಚಯವಿರುವವನೊಬ್ಬ ಜಿಲ್ಲಾ ಪೊಲೀಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಮಾಹಿತಿ ಪಡೆದ ನಂತರ ಪೊಲೀಸರು ಚೌಧರಿಯ ಔಷಧಾಲಯಕ್ಕೆ ದಾಳಿ ನಡೆಸಿ ವೈದ್ಯ ಎಂದು ಬಿಂಬಿಸಿಕೊಂಡಿದ್ದ ಚೌಧರಿಯನ್ನು  ಬಂಧಿಸಿದ್ದಾರೆ.

ಚೌಧರಿಯ  ಔಷಧಾಲಯದಿಂದ ಆಮ್ಲಜನಕ ಸಿಲಿಂಡರ್‌ಗಳು, ಸಿರಿಂಜುಗಳು ಹಾಗೂ  ಇತರ ವೈದ್ಯಕೀಯ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚೌಧರಿಯನ್ನು ಮಹಾರಾಷ್ಟ್ರ ಚಿಕಿತ್ಸಕರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News