ವೆನೆಝುವೆಲಾದ ಹಳೆಯ ವೀಡಿಯೋ ಶೇರ್‌ ಮಾಡಿ, ಟಿಎಂಸಿಗರಿಂದ ಬಿಜೆಪಿ ಕಾರ್ಯಕರ್ತನ ಕೊಲೆ ಎಂದು ಸುಳ್ಳುಸುದ್ದಿ ಪ್ರಚಾರ

Update: 2021-05-09 07:15 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಟಿಎಂಸಿಗರು ದೌರ್ಜನ್ಯ ಎಸಗುತ್ತಿದ್ದಾರೆ, ಕೊಲೆಗೈಯುತ್ತಿದ್ದಾರೆ ಎಂದು ಹಲವಾರು ನಕಲಿ ವೀಡಿಯೋ ಮತ್ತು ಫೋಟೊಗಳನ್ನು ಹರಿಯಬಿಡಲಾಗಿತ್ತು. ಇದೀಗ ಮತ್ತೊಂದು ನಕಲಿ ವೀಡಿಯೋವನ್ನು ಫ್ಯಾಕ್ಟ್‌ ಚೆಕ್‌ ಸುದ್ದಿತಾಣ altnews.in ಪತ್ತೆ ಹಚ್ಚಿದೆ.

ವೆನಿಝುವೆಲಾ ದೇಶದ ಕ್ರೂರ ವೀಡಿಯೋವೊಂದನ್ನು ಟ್ವಿಟರ್‌ ನಲ್ಲಿ ಪ್ರಕಟಿಸಿರುವ ಬಿಜೆಪಿ ಬೆಂಬಲಿಗರು "ಇದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆಯಾಗಿದೆ. ಟಿಎಂಸಿಗರು ಬಿಜೆಪಿ ಕಾರ್ಯಕರ್ತನನ್ನು ಕೊಲೆಗೈದಿದ್ದಾರೆ. ಆತ ಮಾಡಿದ ತಪ್ಪೇನೆಂದರೆ ಆತ ವಿರೋಧ ಪಕ್ಷವನ್ನು ಬೆಂಬಲಿಸಿರುವುದಾಗಿದೆ. ಭಾರತದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ. ಎಲ್ಲರೂ ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಆದರೆ ಈ ರೀತಿಯಲ್ಲಿ ಕೊಲೆಗೈಯುವುದು ಸಮ್ಮತಾರ್ಹವೇ?" ಎಂಬ ರೀತಿಯ ಭಾವನಾತ್ಮಕ ಸಾಲುಗಳನ್ನು ಬರೆದು ಹರಿಯಬಿಡಲಾಗಿತ್ತು.

"ಈ ವೀಡಿಯೋ ಪೋಸ್ಟ್‌ ಮಾಡಿದ್ದಕ್ಕೆ ಕ್ಷಮಿಸಿ, ಟಿಎಂಸಿ ಕಾರ್ಯಕರ್ತರು ಬಿಜೆಪಿಗರ ಮೇಲೆ ಪ್ರಾಣಿಗಳಂತೆ ದಾಳಿ ನಡೆಸುತ್ತಿದ್ದಾರೆ. ಬಂಗಾಳವು ಜಂಗಲ್‌ ರಾಜ್‌ ಆಗಿದೆ. ರಾಜಕೀಯವು ಇಂತಹಾ ಕೆಟ್ಟ ತಿರುವನ್ನು ಪಡೆದುಕೊಳ್ಳುತ್ತದೆಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ. ಹಿಂದೂಗಳ ಮೇಲೆ ಈ ರೀತಿಯ ಅನ್ಯಾಯ ಮತ್ತು ಕೊಲೆ ನಡೆಸುವುದಕ್ಕಿರುವ ಕಾರಣವಾದರೂ ಏನು?" ಎಂಬ ತಲೆಬರಹಗಳನ್ನು ನೀಡಲಾಗಿದೆ.

ಆದರೆ, altnews.in ಈ ಕುರಿತಾದಂತೆ ಫ್ಯಾಕ್ಟ್‌ ಚೆಕ್‌ ಮಾಡಿದಾಗ ಇದು 2018ರ ವರದಿಯಾಗಿದ್ದು, ವೆನಿಝುವೆಲಾ ದೇಶದಲ್ಲಿ ಡ್ರಗ್‌ ಮಾಫಿಯಾಗಳಿಂದ ಕೊಲೆಯಾದ ಬಾಲಕನ ವೀಡಿಯೋವಾಗಿದೆ ಇದು ಎಂದು ಪತ್ತೆಹಚ್ಚಿದೆ. ಉತ್ತರ ಅಮೆರಿಕಾದಲ್ಲಿರುವ ವೆನಿಝುವೆಲಾದಲ್ಲಿ ಫೆಬ್ರವರಿ 6 2018ರಂದು ನಡೆದ ಕೊಲೆ ಕೃತ್ಯದ ವೀಡಿಯೋವಾಗಿತ್ತು ಇದು. ಡ್ರಗ್‌ ಮಾಫಿಯಾ ತಂಡವೊಂದು ಬಾಲಕನನ್ನು ಅಪಹರಣ ಮಾಡಿ ಕ್ರೂರವಾಗಿ ಕೊಲೆಗೈದು ಆ ವೀಡಿಯೋವನ್ನು ಇಂಟರ್ನೆಟ್‌ ನಲ್ಲಿ ಹರಿಯಬಿಟ್ಟಿತ್ತು. ಈ ವೀಡಿಯೋವನ್ನು ಹೆಕ್ಕಿದ ಬಿಜೆಪಿಗರು ಇದನ್ನು ಟಿಎಂಸಿ ಕಾರ್ಯಕರ್ತರ ತಲೆಗೆ ಕಟ್ಟಿ ಜನರನ್ನು ಪ್ರಚೋದಿಸುವ ಹುನ್ನಾರ ನಡೆಸಿದ್ದರು ಎಂದು ವರದಿ ಹೇಳಿದೆ.

ಈ ಕುರಿತಾದಂತೆ ಡೈಲಿಮೇಲ್‌ ಕೂಡಾ ವರದಿ ಪ್ರಕಟಿಸಿತ್ತು. ಹಲವಾರು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಆದ್ದರಿಂದ, ವೆನಿಜುವೆಲಾದ ಡ್ರಗ್ ಕಾರ್ಟೆಲ್ನ ಕ್ರೂರ ಕೊಲೆ ಕೃತ್ಯದ ಹಳೆಯ ವೀಡಿಯೊವನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಮತದಾನದ ಹಿಂಸಾಚಾರದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News