ವೀಕೆಂಡ್ ಕರ್ಫ್ಯೂಗೆ ಮಂಗಳೂರು ಸಂಪೂರ್ಣ ಸ್ತಬ್ಧ

Update: 2021-05-09 07:19 GMT

ಮಂಗಳೂರು, ಮೇ 9: ವೀಕೆಂಡ್ ಕರ್ಫ್ಯೂನ ಎರಡನೆ ದಿನವಾದ ರವಿವಾರ ಕೂಡಾ ಮಂಗಳೂರು ಬೆಳಗ್ಗಿನಿಂದಲೇ ಸ್ತಬ್ಧವಾಗಿದೆ. ಹಾಲು, ಹಾಪ್‌ಕಾಮ್ಸ್ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದು, ಪಾಲಿಕೆ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿ ಮುಚ್ಚಿಸಿದರು.

ಉರ್ವಾಸ್ಟೋರ್ ಮೀನು ಮಾರುಕಟ್ಟೆಯಲ್ಲಿಯೂ ಎದುರುಗಡೆ ಮುಚ್ಚಿದ್ದು, ಕೆಲಬೆರಳಣಿಕೆಯಲ್ಲಿ ವ್ಯಾಪಾರಸ್ಥರು ಒಳಗಡೆ ಬೆಳಗ್ಗೆ ಹೊತ್ತು ವ್ಯಾಪಾರಕ್ಕೆ ಮುಂದಾಗಿದ್ದು, ಪಾಲಿಕೆ ಅಧಿಕಾರಿಗಳು ಧ್ವನಿ ವರ್ದಕದ ಮೂಲಕ ಎಚ್ಚರಿಕೆ ನೀಡಿ ಮಾರಾಟವನ್ನು ಸ್ಥಗಿತಗೊಳಿಸಿದರು. ಅಲ್ಲೇ ಸಮೀಪದ ಹಾಪ್‌ಕಾಮ್ಸ್‌ ನಲ್ಲಿಯೂ ಜನಸಂದಣಿಯಿದ್ದು, ಅಧಿಕಾರಿಗಳು ಎಚ್ಚರಿಕೆ ನೀಡಿ ಇದೇ ರೀತಿ ಸುರಕ್ಷಿತ ಅಂತರವಿಲ್ಲದೆ ವ್ಯಾಪಾರ ನಡೆಸಿದರೆ ಅಂಗಡಿಯ ಅಳತೆಯ ಸ್ಕೇಲ್ ಅನ್ನೇ ಕೊಂಡೊಯ್ಯುವುದಲ್ಲದೆ, ಪರವಾನಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.

ನಗರದ ಒಳ ಭಾಗಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದು ಹಾಲು ಮೊದಲಾದ ಅಗತ್ಯ ವಸ್ತುಗಳು ಜನರಿಗೆ ಲಭ್ಯವಾಗುವಂತೆ ಮಾಡಿತ್ತಾದರೂ ಗ್ರಾಹಕರ ಸಂಖ್ಯೆ ಅತೀ ವಿರಳವಾಗಿತ್ತು. ಉಳಿದಂತೆ ನಗರದ ಹೃದಯ ಭಾಗ ಸೆಂಟ್ರಲ್ ಮಾರುಕಟ್ಟೆ ಸುತ್ತಮುತ್ತ ಸೇರಿದಂತೆ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಅಗತ್ಯ ವಸ್ತುಗಳ ಸಾಗಾಟದ ವಾಹನಗಳು, ಫುಡ್ ಡೆಲಿವರಿ ವಾಹನಗಳು ಬೆರಳೆಣಿಕೆಯ ಸಂಖ್ಯೆಯಲ್ಲಿ ನಗರದ ರಸ್ತೆಗಳಲ್ಲಿ ಕಂಡು ಬಂತಾದರೂ ಬಹುತೇಕವಾಗಿ ನಗರ ವೀಕೆಂಡ್ ಕರ್ಫ್ಯೂಗೆ ಸ್ತಬ್ಧಗೊಂಡಿದೆ.

ಲಾಠಿಚಾರ್ಜ್ ?

ಈ ನಡುವೆ, ನಗರದ ಅಶೋಕನಗರ ಮತ್ತು ಉರ್ವಾ ಮಾರುಕಟ್ಟೆ ಬಳಿ ಬಹಳಷ್ಟು ಜನ ಗ್ರಾಹಕರು ಸೇರಿದ್ದರಿಂದ ಪೊಲೀಸರು ಲಾಠಿ ಬೀಸಿದ ಘಟನೆ ನಡೆದಿದೆ ಎಂದು ದೂರಲಾಗಿದೆ.

ವೀಕೆಂಡ್ ಕರ್ಫ್ಯೂನಲ್ಲಿಯೂ ಹಾಪ್‌ಕಾಮ್ಸ್ ಹಾಗೂ ಹಾಲಿನ ವ್ಯಾಪಾರಕ್ಕೆ ಬೆಳಗ್ಗೆ 9 ಗಂಟೆಯವರೆಗೆ ಅವಕಾಶವಿದೆ. ಈ ಸಂದರ್ಭ ನಗರದ ಅಶೋಕನಗರ ಹಾಗೂ ಉರ್ವಾ ಮಾರುಕಟ್ಟೆಯ ಹಾಪ್‌ಕಾಮ್ಸ್‌ಗೆ ಖರೀದಿಗೆ ಆಗಮಿಸಿದ್ದ ಹಿರಿಯ ನಾಗರಿಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆನ್ನಲಾಗಿದೆ. ತನ್ನ ಸಂಬಂಧಿಕರೊಬ್ಬರು ಕೂಡಾ ಆ ಹಾಪ್‌ಕಾಮ್ಸ್‌ನಲ್ಲಿ ಖರೀದಿಗೆ ಹೋಗಿದ್ದ ಸಂದರ್ಭ ಲಾಠಿ ಏಟಿನಿಂದ ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಹಿರಿಯ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ. ಅದಲ್ಲದೆ ಹಾಪ್‌ಕಾಮ್ಸನವರು ತನ್ನ ಸಂಬಂಧಿ ಖರೀದಿಸಿದ ಒಂದು ಕೆಜಿ ಸಪೋಟ ಹಾಗೂ ದಾಳಿಂಬೆಗೆ ರಶೀದಿಯನ್ನೂ ನೀಡದೆ ದುಬಾರಿ ದರವನ್ನು ಕೂಡಾ ಹಾಪ್‌ಕಾಮ್ಸ್ ಪಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News