ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್‌ನಿಂದ 2500ಕ್ಕೂ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ

Update: 2021-05-09 07:42 GMT

ಉಡುಪಿ, ಮೇ 9: ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ರಂಝಾನ್ ಪ್ರಯುಕ್ತ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿದ್ದ ಸುಮಾರು ಎರಡು ಸಾವಿರಕ್ಕಿಂತ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಉಡುಪಿ ತಾಲೂಕಿನ ಬಡ ಕುಟುಂಬಗಳಿಗೆ ಈ ರೇಷನ್ ಕಿಟ್ ಗಳನ್ನು ತಲುಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ 'ಜೆಐಎಚ್' ಹೂಡೆ ಅಧ್ಯಕ್ಷ ಅಬ್ದುಲ್ ಕಾದಿರ್ ಮೊಯ್ದಿನ್, ಸಂಕಷ್ಟದ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸುವುದು ಇಸ್ಲಾಮ್ ಕಲಿಸಿಕೊಟ್ಟ ಆದರ್ಶ. ಆ ಹಿನ್ನಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬಹಳಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.

ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯ, ಸ್ವಯಂ ಉದ್ಯೋಗಕ್ಕೆ ಸಹಾಯ ಹೀಗೆ ನಿರಂತರವಾಗಿ ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುತ್ತ ಬಂದಿದೆ. ಇದರ ಅಂಗ ಸಂಸ್ಥೆ ಎಚ್.ಆರ್.ಎಸ್ ಈಗಿನ ಕೋವಿಡ್ ತುರ್ತು ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂಕಷ್ಟಕ್ಕೀಡಾಗಿರುವ 2500 ಕ್ಕಿಂತ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದ್ದೇವೆ. ಜಾತಿ, ಮತ, ಧರ್ಮದ ಬೇಧ ಮಾಡದೆ ಎಲ್ಲರಿಗೂ ವಿತರಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ನಡೆಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಎಚ್‌ಆರ್‌ಎಸ್ ಘಟಕವು ಕೋವಿಡ್ ರಿಲೀಫ್ ಕಾರ್ಯದಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ರೋಗಿಗಳಿಗೆ ಬೇಕಾದ ಎಲ್ಲ ಸಹಾಯ ಹಸ್ತ ಚಾಚಲು ತನ್ನಿಂದಾದ ಪ್ರಯತ್ನ ಮಾಡುತ್ತಿದೆ. ಆಯುಷ್ಮಾನ್ ಮಾರ್ಗದರ್ಶಿ, ಅಂಬ್ಯುಲೆನ್ಸ್ ಸೇವೆ, ಡಾಕ್ಟರ್ ಸೇವೆ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ಎಚ್‌ಆರ್‌ಎಸ್ ಕಾರ್ಯಕರ್ತರು ಜಾತಿ, ಮತದ ಬೇಧವಿಲ್ಲದೆ ಮೃತ ಸೋಂಕಿತರ ಅಂತ್ಯಕ್ರಿಯೆ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿಯ ಲಾಕ್‌ಡೌನ್‌ನಂತೆ ಈ ಬಾರಿಯು ನಮ್ಮ ಕಾರ್ಯಕರ್ತರು ಜನರಿಗೆ ಸಹಾಯ ನೀಡಲು ಹಗಲು ರಾತ್ರಿ ಎನ್ನದೆ ಸೇವೆಯಲ್ಲಿ ನಿರತರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಸ್ಥಾಪಿಸಲಾಗಿದೆ. ಈಗಾಗಲೇ ನೂರಾರು ಮಂದಿ ಕರೆ ಮಾಡಿ ಸಹಾಯ ಕೋರಿದ್ದಾರೆ. ನಮ್ಮ ತಂಡ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ. ಬೆಡ್, ಆಕ್ಸಿಜನ್, ವೆಂಟಿಲೇಟರ್‌ನ ಅಗತ್ಯವಿದ್ದಾಗ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಅದನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗು ತ್ತಿದೆ ಎಂದು ಎಚ್‌ಆರ್‌ಎಸ್ ಸಂಚಾಲಕ ಹಸನ್ ತಿಳಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಜಾತಿ ಮತ ಬೇಧಯಿಲ್ಲದೆ ಸಾವಿರಾರು ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕೋವಿಡ್ ಸೋಂಕಿತರು ಮೃತಪಟ್ಟ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಗೌರವಯುತವಾಗಿ ಅವರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News