×
Ad

"ನಮ್ಮ ಸಲಹೆ ಕಸದಬುಟ್ಟಿಗೆ ಎಸೆಯಲಾಗಿದೆ, ನಿದ್ದೆಯಿಂದ ಎದ್ದು ಕೋವಿಡ್‌ ಸಾಂಕ್ರಾಮಿಕ ತಡೆಗಟ್ಟಲು ಪ್ರಯತ್ನಿಸಿ"

Update: 2021-05-09 15:58 IST

ಹೊಸದಿಲ್ಲಿ: ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್‌ ಸಾಂಕ್ರಾಮಿಕದ ಕುರಿತಾದಂತೆ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು, "ನಿದ್ರೆಯಿಂದ ಎಚ್ಚರಗೊಳ್ಳಬೇಕು" ಮತ್ತು ಕೋವಿಡ್ ಬಿಕ್ಕಟ್ಟಿನಿಂದ ಉಂಟಾಗುವ ಸವಾಲುಗಳನ್ನು ತಗ್ಗಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದೆ.

ಪತ್ರದಲ್ಲಿ, ಅಸೋಸಿಯೇಷನ್, ತನ್ನ ಸದಸ್ಯರು ಮತ್ತು ಇತರ ಸಹೋದ್ಯೋಗಿಗಳ ಸಲಹೆಗಳನ್ನು "ಕಸದ ಬುಟ್ಟಿಗೆ  ಹಾಕಲಾಗಿದೆ" ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿ ನೈಜ ವಾಸ್ತವತೆಗಳನ್ನು ಅರ್ಥಮಾಡಿಕೊಳ್ಳದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆರೋಪಿಸಿದೆ.

ಪೂರ್ವ ಯೋಜಿತವಾಗಿ, ಮೊದಲೇ ಜನರಿಗೆ ತಿಳುವಳಿಕೆ ನೀಡಿ ಲಾಕ್‌ ಡೌನ್‌ ಹೇರುವ ಕುರಿತಾದಂತೆ ಕಳೆದ 20 ದಿನಗಳಿಂದ ಸಂಸ್ಥೆಯು ಒತ್ತಾಯಿಸುತ್ತಿದೆ. ವಿವಿಧ ರಾಜ್ಯಗಳು 10-15 ದಿನಗಳ ಪ್ರತ್ಯೇಕ ಲಾಕ್‌ ಡೌನ್‌ ಹೇರುವ ಕುರಿತು ವೈದ್ಯಕೀಯ ಸಂಘವು ವಿರೋಧವನ್ನೂ ವ್ಯಕ್ತಪಡಿಸಿದೆ. ಸಮರ್ಪಕ ಲಾಕ್‌ ಡೌನ್‌ ಹೇರುವಿಕೆಯಿದ್ದರೆ ವೈದ್ಯಕೀಯ ಆಡಳಿತಗಳಿಗೂ ಸಿಬ್ಬಂದಿಗೂ ಪರಿಸ್ಥೀತಿಯನ್ನು ನಿಭಾಯಿಸಲು ಸಮರ್ಪಕ ಸಮಯ ದೊರಕುತ್ತಿತ್ತು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವತ್ರಿಕ ಲಸಿಕೆ ಅಭಿಯಾನವನ್ನು ಸರಕಾರವು ಏಕೆ ತಡವಾಗಿ ಕೈಗೊಂಡಿದೆ? ಎಲ್ಲರಿಗೂ ಏಕೆ ಸರಿಯಾಗಿ ಲಸಿಕೆ ಲಭ್ಯವಾಗಲಿಲ್ಲ? ಎಂದು ಸಹ ವೈದ್ಯಕೀಯ ಸಂಘವು ತನ್ನ ಪತ್ರದಲ್ಲಿ ಪ್ರಶ್ನಿಸಿದೆ. ಲಸಿಕೆಗಳ ದರಗಳಲ್ಲೂ ವಿಭಿನ್ನತೆಯಿರುವ ಕುರಿತು ಪ್ರಶ್ನಿಸಿದೆ. ಆಮ್ಲಜನಕ ಕೊರತೆ, ವೈದ್ಯರು ವೈರಸ್‌ ಗೆ ಹೇಗೆ ಬಲಿಯಾಗುತ್ತಿದ್ದಾರೆ ಎನ್ನುವುದರ ಕುರಿತು ಸಂಶೋಧನೆಯನ್ನು ಹೆಚ್ಚಿಸುವ ಅಗತ್ಯತೆಯ ಕುರಿತು ಪತ್ರವು ಬೆಟ್ಟು ಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಬಜೆಟ್‌ ಅನ್ನು ಜಿಡಿಪಿಯ ಶೇಕಡಾ ೮ಕ್ಕೆ ಹೆಚ್ಚಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News