ಕೊರೋನ ಕರ್ಫ್ಯೂನಿಂದ ಬೀದಿಗೆ ಬಿದ್ದ ಬದುಕು !: ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಹೃದಯ ವಿದ್ರಾವಕ ಸ್ಥಿತಿಯಿದು
ಮಂಗಳೂರು, ಮೇ 9: ಕೊರೋನ ಎರಡನೆ ಅಲೆ ಜನರ ಆರೋಗ್ಯ- ಪ್ರಾಣಗಳ ಜತೆ ತನ್ನ ರುದ್ರನರ್ತನ ಮುಂದುವರಿಸಿರುವಂತೆಯೇ ಬಡವರು, ಕೂಲಿಯಾಳುಗಳು, ವಲಸೆ ಕಾರ್ಮಿಕರ ಬದುಕನ್ನೂ ಬೀದಿಗೆ ತಳ್ಳಿದೆ. ಅದಕ್ಕೊಂದು ಉದಾಹರಣೆಯೆಂಬಂತೆ ಮೂಲತಃ ಉತ್ತರ ಕರ್ನಾಟಕದ ವಲಸೆ ಕಾರ್ಮಿಕ ಕುಟುಂಬಗಳು ಊಟಕ್ಕಾಗಿ ನಗರದ ಬೀದಿಯಲ್ಲಿ ಅಲೆಯುತ್ತಿವೆ.
‘‘ಕೆಲಸ ಇಲ್ಲ. ಕೂಲಿ ಕೆಲಸ ಮಾಡುವವರು ನಾವು ನಮ್ಮ ಕುಟುಂಬದ ಜತೆ ಹಲವಾರು ವರ್ಷಗಳಿಂದ ಇಲ್ಲೇ ಬದುಕು ಕಟ್ಟಿಕೊಂಡಿದ್ದೇವೆ. ಹೊಯ್ಗೆ ಬಜಾರ್ ಬಳಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿಯ ಮನೆ ಬಾಡಿಗೆ ಪಡೆದು ವಾಸಿಸುತ್ತಿದ್ದೇವೆ. ಆದರೆ ಇದೀಗ ಬಾಡಿಗೆ ಕಟ್ಟಲು ಹಣವಿಲ್ಲ. ಅಷ್ಟೇ ಏಕೆ ಊಟಕ್ಕಾಗಿ ಬೀದಿ ಬದಿ ಅನ್ನ ನೀಡುವವರಿಗೆ ಕೈ ಒಡ್ಡುವ ಪರಿಸ್ಥಿತಿ ನಮ್ಮದಾಗಿದೆ. ನಾನು ಮಂಗಳೂರಿಗೆ ಬಂದು ಆರು ವರ್ಷವಾಗಿದೆ. ಕಳೆದ ವರ್ಷದ ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ’’ ಎನ್ನುತ್ತಾರೆ ಉತ್ತರ ಕರ್ನಾಟಕ ನಿವಾಸಿ ಮಹೇಶ್.
‘‘ನಾನು ಎಂಟು ವರ್ಷದ ಹಿಂದೆ ಮಂಗಳೂರಿಗೆ ಬಂದು ಇಲ್ಲಿ ಬಂದರು ಧಕ್ಕೆಯಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದೆ. ಒಂದೆರಡು ವರ್ಷದಿಂದೀಚೆಗೆ ಮೀನುಗಾರಿಕಾ ಬೋಟ್‌ನಲ್ಲಿಯೂ ಕೆಲಸವಿಲ್ಲದೆ ಗಾರೆ, ಕಾಂಕ್ರೀಟ್ ಕೆಲಸ ಮಾಡಿಕೊಂಡಿದ್ದೇನೆ. ಟೌನ್‌ಹಾಲ್ ಎದುರು ನಿಂತರೆ ಗುತ್ತಿಗೆದಾರರು ಕೆಲಸ್ಕೆ ಕರೆದೊಯ್ಯುತ್ತಿದ್ದರು. ಇದೀಗ ಹಲವು ಸಮಯದಿಂದ ಕೆಲಸವೇ ಇಲ್ಲ. ವಾರದಲ್ಲಿ ಒಂದೆರಡು ಕೆಲಸ ಸಿಕ್ಕರೆ ಆಯಿತು. ಅದೂ ಈಗ ಕೆಲ ವಾರಗಳಿಂದ ಇಲ್ಲ. ನನ್ನ ಪತ್ನಿ ಮನೆಕೆಲಸಕ್ಕೆ ಹೋಗುತ್ತಿದ್ದರು. ಅದೂ ಇಲ್ಲ. ಮನೆ ಬಾಡಿಗೆ ಕಟ್ಟಲು ದುಡ್ಡಿಲ್ಲದೆ ಮನೆಯಿಂದ ಹೊರಗಿದ್ದು, ದಿನ ದೂಡುತ್ತಿದ್ದೇವೆ. ನಮಗೆ ಬಿಡಿ ಮಗುವಿನ ಶೌಚಕ್ಕೆ, ಸ್ನಾನಕ್ಕೂ ತೊಂದರೆಯಾಗಿದೆ’’ ಎಂದು ಹೇಳುತ್ತಾರೆ ರಾಜೇಶ್.
‘‘ನಿನ್ನೆ ಯಾರೋ ದಯಾವಂತರು ವಾಹನದಲ್ಲಿ ಬಂದು ಊಟ ನೀಡಿದ್ದರು. ಅದಕ್ಕಾಗಿ ಇಲ್ಲಿ ಕಾಯುತ್ತಿದ್ದೇವೆ. ಮೈದಾನದ ಬಳಿ ಊಟ ನೀಡುತ್ತಾರೆ. ಆದರೆ ಅಲ್ಲಿ ತುಂಬಾ ಜನ ಗುಂಪಾಗಿ ಸೇರುತ್ತಾರೆ. ನಮ್ಮ ಜತೆ ಹೆಣ್ಣು ಮಕ್ಕಳು ಇರೋದರಿಂದ ಇಲ್ಲಿ ಉಟಕ್ಕಾಗಿ ಕಾಯುತ್ತಿದ್ದೇವೆ. ಊಟ ಸಿಕ್ಕರೆ ಆಯಿತು. ಇಲ್ಲವಾದರೆ ಉಪವಾಸವೇ ಗತಿ. ಹೀಗೇ ಮುಂದುವರಿದರೆ ನಾವೆಲ್ಲಾ ಬೀದಿ ಹೆಣವಾಗಬೇಕಷ್ಟೆ’’ ಎಂದು ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜು ಎದುರಿನ ಫುಟ್‌ಪಾತ್‌ನಲ್ಲಿ ಊಟಕ್ಕಾಗಿ ಕುಟುಂಬದ ಜತೆ ಕಾಯುತ್ತಿದ್ದ ರಾಜೇಶ್ ನುಡಿದರು.
‘‘ಹಿಂದೆ ಮನೆಕೆಲಸಕ್ಕೆ ಹೋದರೆ ದಿನಕ್ಕೆ 300 ರೂ.ನಂತೆ ಸಿಗುತ್ತಿತ್ತು. ಆದರೆ ಕೆಲಸವಿಲ್ಲದೆ ಅದೆಷ್ಟೋ ದಿನಗಳಾದವು. ಹಾಗಿದ್ದರೂ ಅಲ್ಲಿಲ್ಲಿ ಸಿಕ್ಕ ತರಕಾರಿಯೋ, ಅನ್ನನೋ ಬೇಯಿಸಿಕೊಂಡು ಹಸಿವು ನೀಗಿಸಬಹುದಿತ್ತು. ನಿನ್ನೆಯಿಂದ ಅಂಗಡಿ ಮಾರುಕಟ್ಟೆಗಳೆಲ್ಲವೂ ಬಂದ್ ಆಗಿವೆ. ಈಗ ಮಗುವಿಗೆ ಬಿಸ್ಕತ್ತು ಕೊಡಿಸಲೂ ಕೈಯ್ಯಲ್ಲಿ ಕಾಸಿಲ್ಲ’’ ಎಂದು ಸುಧಾ ಅಳಲು ತೋಡಿಕೊಂಡರು. ನಾಲ್ಕು ವರ್ಷದ ಪುಟ್ಟ ಮಗು ಕೂಡಾ ಇವರ ಜತೆಗಿದೆ. ಒಬ್ಬ ಮಹಿಳೆ ಗರ್ಭಿಣಿ ಕೂಡಾ.