ಪರ್ಕಳ ಹೆದ್ದಾರಿ ಅಗಲೀಕರಣ ಕಾಮಗಾರಿ: ಭೂಮಿ, ಮನೆ ಕಳೆದುಕೊಂಡು ಶೆಡ್ಡಿನಲ್ಲಿ ಬದುಕುತ್ತಿರುವ ಅಣ್ಣ-ತಂಗಿಯರು!

Update: 2021-05-09 13:08 GMT

ಮಣಿಪಾಲ, ಮೇ 9: ಪರ್ಕಳ ರಾಷ್ಟ್ರೀಯ ಹೆದ್ದಾರಿ169ಎ ಅಗಲೀಕರಣ ಕಾಮಗಾರಿಯಿಂದ ಭೂಮಿ ಹಾಗೂ ಮನೆ ಕಳೆದುಕೊಂಡಿರುವ ಅಣ್ಣ ತಂಗಿಯರು ಇದೀಗ ಶೆಡ್‌ನಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ.

ಪರ್ಕಳದ ಶಂಕರ್(74) ಹಾಗೂ ಅವರ ಸಹೋದರಿಯರಾದ ಪ್ರಪುಲ್ಲ ಶೆಟ್ಟಿಗಾರ್(65), ಪ್ರಮೀಳಾ ಶೆಟ್ಟಿಗಾರ್(50) ತಮ್ಮ 14 ಸೆಂಟ್ಸ್ ಸ್ವಂತ ಜಾಗದಲ್ಲಿದ್ದ ಮನೆಯನ್ನು ಕಳೆದುಕೊಂಡು ಮನೆಯ ಹಿಂದಿರುವ ತಗಡು ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ.

ನಮ್ಮ ಮನೆಯ ಹಿಂಬದಿ ಜಾಗ ಕುಟುಂಬದವರಿಗೆ ಸೇರಿರುವುದವರಿಂದ ಸುಮಾರು ಏಳು ಪಾಲು ಆಗಬೇಕಾಗಿದೆ. ಆದುದರಿಂದ ನಮಗೆ ಸದ್ಯಕ್ಕೆ ಈ ಶೆಡ್ಡೇ ಗತಿಯಾಗಿದೆ. ಅದಲ್ಲದೆ ಆಗಾಗ ಪ್ರತಿನಿತ್ಯ ಸುರಿವ ಅಕಾಲಿಕ ಮಳೆಯಿಂದ ಶೆಡ್‌ನಲ್ಲಿ ಕುಳಿತುಕೊಳ್ಳಲು ಆಗದೆ ನಾವು ಸಂಬಂಧಿಕರ ಮನೆಗೆ ಹೋಗುತ್ತಿದ್ದೇವೆ ಎನ್ನುತ್ತಾರೆ ಶಂಕರ್ ಶೆಟ್ಟಿಗಾರ್.

ಪ್ರಪುಲ್ಲ ಶೆಟ್ಟಿಗಾರ್ ಮನೆಯ ಎದುರಿರುವ ಪ್ರೆಸ್‌ನಲ್ಲಿ ಬುಕ್ ಬೈಂಡ್ ಮಾಡಿ ಜೀವನ ಸಾಗಿಸುತ್ತಿದ್ದು, ಇದೀಗ ರಸ್ತೆಯ ಎರಡೂ ಬದಿ ಅಗಲವಾಗಿರುವರಿಂದ ಪ್ರೆಸ್ ಸ್ಥಳಾಂತರಿಸಲಾಗಿದೆ. ಅತ್ತ ಪ್ರೆಸ್ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಯಲ್ಲಿರುವ ಪ್ರಫುಲ್ಲ, ಇತ್ತ ರಸ್ತೆ ಕಾಮಗಾರಿಗಾಗಿ ಕಳೆದುಕೊಂಡ ಪರಿಹಾರದ ಹಣ ಬಿಡುಗಡೆಯಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದೀಗ ಲಾಕ್‌ಡೌನ್‌ನಿಂದ ಈ ಕುಟುಂಬ ಬದುಕು ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ಬಳಿ ವಿಚಾರಿಸಿದಾಗ ರಸ್ತೆ ಕಾಮಗಾರಿಗೆ ತಡೆಯಾಜ್ಞೆ ಇದೆ ಎಂಬ ಸಬೂಬು ನೀಡುತ್ತಾರೆ. ಅತ್ತ ಕೆಲಸವೂ ಇಲ್ಲ, ಇತ್ತ ಜಿಲ್ಲಾಡಳಿತದಿಂದ ಪರಿಹಾರದ ಹಣವೂ ಬಿಡುಗಡೆಯಾಗಿಲ್ಲ. ನಮ್ಮ ಪರಿಸ್ಥಿತಿ ಯಾರ ಬಳಿ ಹೇಳಿದರೂ ಪ್ರಯೋಜನವಿಲ್ಲ. ನಮ್ಮಂತ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು, ಕೆಲಸ ಕಳೆದು ಕೊಂಡವರು, ವಯಸ್ಸಾದವರು ಹೇಗೆ ಜೀವನ ಸಾಗಿಸಲಿ ಎಂದು ಪ್ರಪುಲ್ಲಾ ಶೆಟ್ಟಿಗಾರ್ ಕಣ್ಣೀರಿಡುತ್ತಿದ್ದಾರೆ.

ಮನೆ ಕಟ್ಟಲು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿರುತ್ತದೆ. ಅಷ್ಟೊಂದು ಹಣ ನಮ್ಮಲ್ಲಿಲ್ಲ. ನಮ್ಮ ಭೂಮಿ ಕಳಕೊಂಡ ಭಾಗದ ಹಣ ನಮಗೆ ನೀಡಿದರೆ, ನಾವು ಚಿಕ್ಕ ಮನೆಯಾದರೂ ಕಟ್ಟಿ ಕುಳಿತುಕೊಳ್ಳುತ್ತೇವೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News