25 ಜನರ ಮಿತಿಯೊಳಗೆ ಮನೆಯಲ್ಲೇ ಸರಳ ಮದುವೆ ಆಯೋಜಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಮೇ 9: ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಮೇ 10ರಂದು ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಜಾರಿಗೊಳಿಸಿ ಆದೇಶಿಸಿರುವ ಜಿಲ್ಲಾಧಿಕಾರಿ ಪೂರ್ವನಿಗದಿತ ಮದುವೆಗಳನ್ನು ಗರಿಷ್ಠ 25 ಜನರ ಪರಿಮಿತಿಗೊಳಪಟ್ಟು ಆಯಾ ಮನೆಯಲ್ಲಿ ಸರಳವಾಗಿ ಆಯೋಜಿಸಬೇಕು ಎಂದು ತಿಳಿಸಿದ್ದಾರೆ.
ಮದುವೆಗೆ ಸಂಬಂಧಿಸಿ ಈ ಹಿಂದಿನ ಆದೇಶದಂತೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದುಕೊಳ್ಳಬೇಕು. ಪಾಸ್ ಪಡೆದವರು ಮಾತ್ರ ಮದುವೆಯಲ್ಲಿ ಭಾಗವಹಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಜಿಲ್ಲಾಧಿಕಾರಿ, ಶವ ಸಂಸ್ಕಾರಕ್ಕೆ ಐದು ಮಂದಿ ಭಾಗವಹಿಸಲು ಅನುಮತಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರಕಾರ ಈಗಾಗಲೇ ಹೊರಡಿಸಿದ ಆದೇಶಕ್ಕೆ ಪೂರಕವಾಗಿ ಈ ಮಾರ್ಗಸೂಚಿ ಬಿಡುಗಡೆಗೊಳಿಸಲಾ ಗಿದೆ. ಸರಕಾರದ ಆದೇಶದ ಎಲ್ಲ ಮಾರ್ಗಸೂಚಿಗಳು ಪಾಲನೆಯಾಗಲಿವೆ. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಮೀನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ ಸಂಬಂಧಿಸಿದ ಅಂಗಡಿಗಳು ಬೆಳಗ್ಗೆ 6ರಿಂದ 9ರವರೆಗೆ ತೆರೆಯಬಹುದು.
ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಪ್ರಾಣಿಗಳ ಮೇವು ವ್ಯಾಪಾರ ನಡೆಸುವ ಅಂಗಡಿಗಳು ಬೆಳಗ್ಗೆ 6ರಿಂದ 9ರವರೆಗೆ ತೆರೆದಿಡಬಹುದು. ಬೆಳಗ್ಗೆ 9ಕ್ಕೆ ಅಂಗಡಿ ಮುಚ್ಚಿ 10ರೊಳಗೆ ಮಾರಾಟಗಾರರು ಹಾಗೂ ಖರೀದಿದಾರರು ಮನೆ ತಲುಪಬೇಕು. ಬಳಿಕ ಸಂಚಾರ ಕಂಡುಬಂದರೆ ವಾಹನ ಮುಟ್ಟುಗೋಲು ಹಾಕಲಾಗುವುದು. ಹಾಲಿನ ಬೂತ್, ಹಾಪ್‌ಕಾಮ್ಸ್, ತರಕಾರಿ, ಹಣ್ಣಿನ ತಳ್ಳುಗಾಡಿಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.