ಅಗತ್ಯ ವಸ್ತುಗಳ ಖರೀದಿಗೆ ಬರುವವರು ವಾಹನ ಬಳಸುವಂತಿಲ್ಲ : ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಮೇ 9: ಸೋಮವಾರದಿಂದ ಜಾರಿಯಾಗಲಿರುವ ಲಾಕ್‌ಡೌನ್ ಹೊಸ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದುದರಿಂದ ಬೆಳಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವವರು ನಡೆದುಕೊಂಡೇ ಬರಬೇಕೆ ಹೊರತು ವಾಹನವನ್ನು ಬಳಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸರಕಾರದ ಆದೇಶವನ್ನು ಬದಲಾಯಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇರುವುದಿಲ್ಲ. ಸರಕಾರ ಆದೇಶವನ್ನು ಬದಲಾಯಿಸಿದರೆ ಮಾತ್ರ ಅಗತ್ಯ ವಸ್ತು ಗಳ ಖರೀದಿಗೆ ವಾಹನಗಳ ಬಳಕೆಗೆ ಅವಕಾಶ ಕೊಡಲಾಗುವುದು. ಈವರೆಗೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಅವರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಕೊರೋನ ಲಸಿಕೆ ಪಡೆಯಲು ಕೇಂದ್ರಕ್ಕೆ ಬರುವವರಿಗೆ ವಾಹನ ಬಳಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನೋಂದಾಣಿ ಮಾಡಿಕೊಂಡವರು ದಾಖಲೆ ಯನ್ನು ತೋರಿಸಬೇಕು. ಅಂತವರಿಗೆ ಮಾತ್ರ ಬರಲು ಅವಕಾಶ ನೀಡಲಾಗುವುದು. ನಿಯಮ ಉಲ್ಲಂಘಿಸಿ ಹೊರಗಡೆ ಬರುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.