×
Ad

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಉಡುಪಿಯ ನಾಲ್ಕು ಕೇಂದ್ರಗಳಲ್ಲಿ ಚಾಲನೆ

Update: 2021-05-09 21:55 IST

ಉಡುಪಿ, ಮೇ 9: ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮವು ಮೇ 10ರಿಂದ ನಾಲ್ಕು ಕೇಂದ್ರ ಗಳಲ್ಲಿ ಆರಂಭಗೊಳ್ಳಲಿದೆ.

ಉಡುಪಿಯ ಜಿಲ್ಲಾಸ್ಪತ್ರೆ(ಸೈಂಟ್ ಸಿಸಿಲಿಸ್ ಶಾಲೆ), ಉಡುಪಿ ನಗರ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಮಧ್ಯಾಹ್ನ 2ಗಂಟೆಯಿಂದ ಲಸಿಕೆ ನೀಡುವ ಕಾರ್ಯ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ನೋಂದಣಿ

ಈಗಾಗಲೇ ಕೋವಿನ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡವರು, ವೆಬ್‌ಸೈಟ್‌ನಲ್ಲಿ ಲಸಿಕಾ ಕೇಂದ್ರ (ಸೆಷನ್ಸ್ ಸೈಟ್) ಮತ್ತು ದಿನಾಂಕ(ಮೇ 10,11, 12)ವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಅವರ ಮೊಬೈಲ್‌ಗೆ ನಾಲ್ಕು ಡಿಜಿಟ್‌ಗಳ ನಂಬರ್‌ನ ಮೇಸೆಜ್ ಬರುತ್ತದೆ.

ನಾಲ್ಕು ಡಿಜಿಟ್‌ನ ನಂಬರ್ ಇಟ್ಟುಕೊಂಡು ತಮ್ಮ ಲಸಿಕಾ ಕೇಂದ್ರಕ್ಕೆ ಹೋದರೆ ಮಾತ್ರ ಲಸಿಕೆಯನ್ನು ನೀಡಲಾಗುತ್ತದೆ. ಅದು ಬಿಟ್ಟು ಸ್ಥಳದಲ್ಲಿ ನೋಂದಾಣಿ ಇರುವುದಿಲ್ಲ. ಆದುದರಿಂದ ಯಾರು ಕೂಡ ಅನಗತ್ಯವಾಗಿ ಲಸಿಕಾ ಕೇಂದ್ರಗಳಿದೆ ಬರಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

400 ಲಸಿಕೆ ವಿತರಣೆ

ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ತಲಾ 100ರಂತೆ ಒಟ್ಟು 400 ಮಂದಿಗೆ ಮಾತ್ರ ಲಸಿಕೆ ನೀಡಲಾಗುವುದು. ಮೇ 11ರಿಂದ ತಲಾ 150ರಂತೆ ಲಸಿಕೆ ನೀಡಲು ಇಲಾಖೆ ನಿರ್ಧರಿಸಿದೆ.

ಉಡುಪಿ ಜಿಲ್ಲೆಗೆ ಮೇ 10ರಂದು ಬೆಳಗ್ಗೆ ಲಸಿಕೆ ಪೂರೈಕೆಯಾಗಲಿದೆ. 45 ವರ್ಷ ಮೇಲ್ಪಟ್ಟವರಿಗೆ 1000 ಕೋವಿಶೀಲ್ಡ್ ಮತ್ತು 18ವರ್ಷ ಮೇಲ್ಪಟ್ಟವರಿಗೆ 4500 ಕೋವಿಶೀಲ್ಡ್ ಲಸಿಕೆ ಬರಲಿದೆ

ಮೇ 10ರಂದು ಬೆಳಗ್ಗೆ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು ಆರು ವಾರಗಳ ಅವಧಿ ಮೀರಿದವರಿಗೆ ಸೈಂಟ್ ಸಿಲಿಲಿಸ್ ಕೇಂದ್ರದಲ್ಲಿ 150 ಮಂದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಥಮ ಡೋಸ್ ಪಡೆಯುವವರಿಗೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News